ಬೆಂಗಳೂರು, (ಡಿ.14); ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪಸಿಂಹ ಅವರಿಗೆ ಪಾಸ್ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ಆದ ಕಾರಣ ಬಿಜೆಪಿ ಹಿರಿಯ ಮುಖಂಡರು ಅವರಿಗೆ ಕರೆದು ಬುದ್ದಿ ಹೇಳಬೇಕು. ಪಾಸ್ ಕೊಡುವಾಗ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅದಕ್ಕೆ ಆಕ್ಷೇಪಿಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ, ಘಟನೆಯನ್ನು ರಾಜಕೀಯಕರಣ ಗೊಳಿಸಬಾರದು. ಎಲ್ಲರೂ ಖಂಡಿಸುವ ಘಟನೆ ಇದು ಎಂದರು. ಈ ವೇಳೆ ಕಾಂಗ್ರೆಸ್ ಸದಸ್ಯರಾದ ನಯನಾ ಮೋಟಮ್ಮ, ರಿಜ್ವಾನ ಅರ್ಷದ್, ಸಚಿವ ಪ್ರಿಯಾಂಕ ಖರ್ಗೆ ಕಾಂಗ್ರೆಸ್ ಸದಸ್ಯರು ಪಾಸ್ ಕೊಟ್ಟಿದ್ದರೆ ಈಗಾಗಲೇ ದೇಶದ್ರೋಹದ ಪಟ್ಟ ಕಟ್ಟುತ್ತಿದ್ದೀರಿ ಎಂದು ತಿರುಗೇಟು ನೀಡಿದರು.
ಇದು ಆಡಳಿತ- ಪ್ರತಿಪಕ್ಷದ ನಡುವೆ ಜಟಾಪಟಿಗೆ ಕಾರಣವಾಯಿತು. ಪರಸ್ಪರ ಆರೋಪ- ಪ್ರತ್ಯಾರೋಪಕ್ಕೆ ದಾರಿ ಮಾಡಿಕೊಟ್ಟಿತು. ಈ ನಡುವೆ, ‘ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆದಾಗಡಿ.ಕೆ.ಶಿವಕುಮಾರ್ ಅವರೆಲ್ಲರೂ ತಮ್ಮ ಸಹೋದರರು ಎಂದು ಹೇಳಿದ್ದರು. ಹಾಗಂತ ನಾವೇನಾದರೂ ನೀವು ಭಯೋತ್ಪಾದಕರು, ಉಗ್ರರು ಎಂದು ಹೇಳಿದ್ದೀವಾ?’ ಎಂದು ಅಶೋಕ್ ಪ್ರಶ್ನಿಸಿದರು. ಇದು ಆಡಳಿತ ಪಕ್ಷವನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತು.
ಮಾತಿನ ಚಕಮಕಿ ಜೋರಾಯಿತು. ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಕೂಡ ಗೊತ್ತಾಗಲಿಲ್ಲ. ಆಗ ಸಭಾಧ್ಯಕ್ಷರು, ಹತ್ತು ನಿಮಿಷಗಳ ಕಲಾಪವನ್ನು ಕಾಲ ಮುಂದೂಡಿದರು.
ಬಳಿಕ ಕಲಾಪ ಶುರು ಮಾಡಿದ ಸಭಾಧ್ಯಕ್ಷರು, ಸದನದಲ್ಲಿ ಉಳಿದ ಯಾರಿಗೂ ಮಾತನಾಡಲು ಅವಕಾಶ ನೀಡದೇ ಖಂಡನಾ ನಿರ್ಣಯವನ್ನು ತೆಗೆದುಕೊಂಡರು. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲೂ ಭದ್ರತಾ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಪಾಸ್ ಕೊಡುವಾಗ ಕಡ್ಡಾಯವಾಗಿ ಪರಿಚಿತರಿಗೆ ನೀಡಬೇಕು ಎಂದು ಸೂಚಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….