Site icon Harithalekhani

10 ದಿನ ಕಳೆದರು ಆರಂಭವಾಗದ ರಾಗಿ ಖರೀದಿ ನೊಂದಣಿ; ಕೇಳೋರಿಲ್ಲ ಅನ್ನದಾತನ ಅಳಲು..! / ದಲ್ಲಾಳಿಗಳೊಂದಿಗೆ ಅಧಿಕಾರಿಗಳ ಒಳ ಒಪ್ಪಂದವೆಂದು ರೈತ ಮುಖಂಡನ ಗಂಭೀರ ಆರೋಪ

ಬೆಂ.ಗ್ರಾ.ಜಿಲ್ಲೆ, (ಡಿ.11): ಜಿಲ್ಲಾಧಿಕಾರಿ ಸೂಚನೆಯಂತೆ ಡಿ.01 ಆರಂಭವಾಗಬೇಕಿದ್ದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ 10ದಿನ ಕಳೆದರು ನೊಂದಣಿಗೆ ಯಾವುದೇ ಸಿದ್ಧತೆ ಕಂಡುಬರುತ್ತಿಲ್ಲ. ಇದರಿಂದಾಗಿ ಪ್ರತಿದಿನ ರೈತರು ಕೆಲಸ ಕಾರ್ಯಗಳನ್ನು ಬಿಟ್ಟು ನೊಂದಣಿ ಕೇಂದ್ರದ ಬಳಿ ಅಲೆಯುವಂತಾಗಿದೆ.

ನವೆಂಬರ್ 21ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಮೊದಲನೆಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಎನ್ ಅವರು ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿದ್ದರು.

ಪ್ರತಿ ಕ್ವಿಂಟಾಲ್ ರಾಗಿಗೆ 3846 ರೂಪಾಯಿ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಪಡಿಸಿದೆ. ಕನಿಷ್ಟ ಬೆಂಬಲ ಯೋಜನೆಯಡಿ ರಾಗಿ ಖರೀದಿಗೆ ಸಂಬಂಧಿಸಿದಂತೆ ಸಂಗ್ರಹಣಾ ಏಜೆನ್ಸಿಗಳು ಪ್ರತಿ ತಾಲ್ಲೂಕು ಹಂತದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ತೆರೆಯಬೇಕು, ರಾಗಿ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಕಾರ್ಯಕ್ಕೆ ನಿಗದಿತ ಸ್ಥಳಗಳನ್ನು ಗುರ್ತಿಸಿ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ನೋಂದಣಿಗೆ ಯಾವುದೇ ಸಮಸ್ಯೆ ಆಗದಂತೆ ಕಂಪ್ಯೂಟರ್ ಗಳು, ಇಂಟರ್ನೆಟ್ ವ್ಯವಸ್ಥೆ ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜಿಸಿ. ರೈತರಿಗೆ ಮೂಲಭೂತ ಸೌಕರ್ಯಗಳನ್ನು  ಕಲ್ಪಿಸಿ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದರು. ರೈತರಿಂದ ಖರೀದಿಸಿದ ಧಾನ್ಯಗಳನ್ನು ಕ್ರೋಢೀಕರಿಸಿ  ಶೇಖರಿಸಲು ಗೋದಾಮಗಳ ಗುಣಮಟ್ಟ ಪರಿಶೀಲಿಸಿ ಎಂದು ಡಿಸಿ ಸೂಚಿಸಿದ್ದರು.

2023-24 ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದಿರುವ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ದತ್ತಾಂಶದಲ್ಲಿ ರೈತರು ನೋಂದಾಯಿಸಿಕೊಂಡು, ಐಡಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಹೇಳಿದ್ದರು‌.

ಅಂದು ನಡೆದ ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆ ಜಂಟಿ ಕಾರ್ಯದರ್ಶಿ ಜಿ. ಗಿರಿಜಾದೇವಿ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಆರ್ ರಮೇಶ್, ದೊಡ್ಡಬಳ್ಳಾಪುರ ಎ‌.ಪಿ.ಎಂ.ಸಿ ಕಾರ್ಯದರ್ಶಿ ಅಂಜುಂ,  ಆಹಾರ ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕಿ ಶೋಭ ಹೆಚ್.ಟಿ, ತಾಲ್ಲೂಕು ಆಹಾರ ಶಿರಸ್ತೇದಾರರು ಹಾಗೂ ನಿರೀಕ್ಷಕರು, ಸಿಬ್ಬಂದಿ ಇದ್ದರು.

ಆದರೆ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭಿಸಲು ಯಾವುದೇ ಕ್ರಮ ಕೈಗೊಳ್ಳದ ಕಾರಣ ಡಿ.01 ಆರಂಭವಾಗಬೇಕಿದ್ದ ನೋಂದಣಿ ಪ್ರಕ್ರಿಯೆ 10 ದಿನಗಳೆದರು ಇನ್ನೂ ಆರಂಭವಾಗದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಭೀರ ಆರೋಪ; ಈ ಕುರಿತಂತೆ ಹರಿತಲೇಖನಿಯೊಂದಿಗೆ ಮಾತನಾಡಿರುವ ಕರ್ನಾಟಕ ರಾಜ್ಯ ರೈತ ಶಕ್ತಿ ಸಂಘದ ರಾಜ್ಯಾಧ್ಯಕ್ಷ ಹೊನ್ನಾಘಟ್ಟ ಮಹೇಶ್, ಅಧಿಕಾರಿಗಳು ಮತ್ತು ದಲ್ಲಾಳಿಗಳ ನಡುವಿನ ಒಳ ಒಪ್ಪಂದಿಂದಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿ ಸೂಚನೆಯಂತೆ ನಿಗದಿ ಸಮಯದಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾದರೆ ರೈತರು ನೆಮ್ಮದಿ ನೊಂದಣಿ ಮಾಡಿಸುತ್ತಿದ್ದರು. ಆದರೆ ಅಧಿಕಾರಿಗಳು ದಲ್ಲಾಳಿಗಳ ಒತ್ತಡಕ್ಕೆ ಮಣಿದು ನೋಂದಣಿ ಆರಂಭಿಸದೆ..ಅಂತಿಮ ದಿನಾಂಕ ಇರುವ ಸಂಧರ್ಭದಲ್ಲಿ ಆರಂಭಿಸಿ ನೊಂದಣಿ ಪ್ರಕ್ರಿಯೆ ವೇಳೆ ನೂಕುನುಗ್ಗಲು ಉಂಟಾಗಲು ಕಾರಣವಾಗುತ್ತಿದ್ದಾರೆ. ಅಲ್ಲದೆ. ಬೇನಾಮಿ ಹೆಸರಲ್ಲಿ ಒಳಗೊಳಗೆ ಈಗಾಗಲೇ ದಲ್ಲಾಳಿಗಳು ನೊಂದಣಿ ಪೂರ್ಣಗೊಳಿಸಿರುವ ಅನುಮಾನ ಕಾಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version