ಬೆಂಗಳೂರು, (ಡಿ11): ಕಮಲ- ದಳ ಮೈತ್ರಿ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಆರ್ಎಸ್ಎಸ್ ಪ್ರಭಾಕರ್ ಭಟ್ ಅವರ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಇಲ್ಲಿಗೆ ಬಂದ ಬಳಿಕ ಮನಪರಿವರ್ತನೆಯಾಗಿದೆ ಎಂದು ಆರ್ಎಸ್ಎಸ್ ಹಾಗೂ ಪ್ರಭಾಕರ್ ಭಟ್ ಅವರನ್ನು ಹಾಡಿಹೊಗಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜೆಡಿಎಸ್ ಎನ್‌ಡಿಎ ಜೊತೆ ಮೈತ್ರಿಯಾದ ನಂತರ ಕುಮಾರಸ್ವಾಮಿ ಅವರ ಧಾರ್ಮಿಕ ನಿಲುವುಗಳು ಸಹ ಬದಲಾಗಿವೆ ಎಂಬ ಪ್ರಶಂಸೆ, ಆಕ್ಷೇಪ, ಆಕ್ರೋಶದ ಮಾತುಗಳು ಕೇಳಿಬರುತ್ತಿದೆ.
ಈ ಕುರಿತಂತೆ ಕಾಂಗ್ರೆಸ್ ಸಹ ಕುಮಾರಸ್ವಾಮಿ ಅವರನ್ನು ಟ್ರೋಲ್ ಮಾಡಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ಡಿ ಕುಮಾರಸ್ವಾಮಿಯವರು ಕೋಮುವಾದದ ಕಡೆ ಹೋಗುತ್ತಿರುವ ವೇಗ ನೋಡಿದರೆ ಬಿಜೆಪಿ ಅಧ್ಯಕ್ಷರಾದರೂ ಅಚ್ಚರಿಯಾಗಬೇಕಿಲ್ಲ ಎಂದು ಲೇವಡಿ ಮಾಡಿದೆ.
ಇಂದು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಕುಮಾರಸ್ವಾಮಿಯವರು ಬಿಜೆಪಿಯವರಿಗಿಂತ ಹೆಚ್ಚು ಆರ್ಎಸ್ಎಸ್ ಭಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಅವರು ಕೋಮುವಾದ ಕಡೆಗೆ ಹೋಗುತ್ತಿರುವ ವೇಗ ನೋಡಿದರೆ ಕಲವೇ ದಿನಗಳಲ್ಲಿ ಬಿಜೆಪಿಗಳನ್ನೇ ಓವರ್ ಟೇಕ್ ಮಾಡಿ ಬಿಜೆಪಿ ಅಧ್ಯಕ್ಷರಾದರೂ ಅಚ್ಚರಿ ಇಲ್ಲ ಎಂದು ಕಿಚಾಯಿಸಿದೆ.
ಬಿಜೆಪಿಯವರ ಒಳಜಗಳ ಕುಮಾರಸ್ವಾಮಿಯವರಿಗೆ ವರದಾನವಾಗಲಿದೆ ಎಂದಿರುವ ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿಯವರನ್ನು ರಾಜ್ಯ ಬಿಜೆಪಿಗೆ ಪ್ರತಿಷ್ಠಾಪಿಸಿದರೂ ಅತಿಶಯೋಕ್ತಿ ಇಲ್ಲ ಎಂದು ಲೇವಡಿ ಮಾಡಿದೆ.
ಅಲ್ಲದೇ ಇದೇವೇಳೆ ಎಚ್ಚರದಿಂದಿರಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಗೆ ಟಾಂಗ್ ನೀಡಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….