ನವದೆಹಲಿ, (ಸೆ.27): ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದರಾದ ಮೇನಕಾ ಗಾಂಧಿ ಅವರು ಇಸ್ಕಾನ್ ಸಂಸ್ಥೆಯ ವಿರುದ್ದ ಮಾಡಿರುವ ಗಂಭೀರ ಆರೋಪ ಭಾರೀ ಸಂಚಲನ ಮೂಡಿಸಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮೇನಕಾ ಗಾಂಧಿ ಅವರು ಇಸ್ಕಾನ್ ಮೇಲೆ ಗಂಭೀರ ಆರೋಪ ಮಾಡಿರುವ ಹೇಳಿಕೆಯ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಮೇನಕಾ ಗಾಂಧಿ, “ಒಂದು ನಿಮಿಷ. ನಾನು ನಿಮಗೆ ಹೇಳಿಬಿಡುತ್ತೇನೆ. ಈ ದೇಶದಲ್ಲಿ ಅತೀ ದೊಡ್ಡ ಮೋಸಗಾರರು ಯಾರಾದರೂ ಇದ್ದರೆ ಅದು ಇಸ್ಕಾನ್. ಇವರು ಗೋ ಶಾಲೆಗಳನ್ನು ನಡೆಸಲು ಸರ್ಕಾರದಿಂದ ಬೇಕಾದ ಸೌಲಭ್ಯ, ದೊಡ್ಡ ದೊಡ್ಡ ಜಮೀನುಗಳು, ಗೋಮಾಳಗಳು ಎಲ್ಲ ವ್ಯವಸ್ಥೆ ಸಿಗುತ್ತವೆ.
ಇತ್ತೀಚೆಗಷ್ಟೇ ನಾನು ಇಸ್ಕಾನ್ ನ ಅನಂತಪುರದ ಗೋ ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಒಂದೇ ಒಂದು ಹಸುವೂ ಇರಲಿಲ್ಲ. ಸಂಪೂರ್ಣ ಹೈನುಗಾರಿಕೆ ಯೋಗ್ಯವಾದ ಹಸುವಾಗಲಿ ಇಲ್ಲವೇ ಕರುಗಳಾಲಿ ಇರಲಿಲ್ಲ. ಎಲ್ಲಾ ಕರುಗಳು ಮಾರಾಟವಾಗಿದೆ ಎಂಬುದೇ ಇದರ ಸಾರಾಂಶ. ಬೀದಿ ಬೀದಿಗಳಲ್ಲಿ ಹರೇ ರಾಮ್- ಹರೇ ಕೃಷ್ಣ ಎಂದು ಹೇಳಿಕೊಂಡು ಅಡ್ಡಾಡುವ ಇವರು ಹಾಲಿನಲ್ಲೇ ಅವರ ಜೀವನವಿದೆ ಎಂಬಂತೇ ಹೇಳಿಕೊಳ್ಳುತ್ತಾರೆ.
ಆದರೆ, ಇಸ್ಕಾನ್ ಅವರು ಕಟುಕರಿಗೆ ಮಾರಿದಷ್ಟು ಗೋವುಗಳನ್ನು ಖಂಡಿತವಾಗಿಯೂ ಬೇರೆ ಯಾರೂ ಕೂಡ ಮಾರಿರಲು ಸಾಧ್ಯವೇ ಇಲ್ಲವೇನೋ?!ಇವರೇ ಹೀಗೆ ಮಾಡಿರುವಾಗ ಬೇರೆಯವರ ಕಥೆಯೇನು? ಎಂದು ಬಿಜೆಪಿ ಸಂಸದೆ ಮೇನಕಾ ಹೇಳಿದ್ದಾರೆ.
ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಪ್ರಶಾಂತ್ ಕನೋಜಿಯಾ ಅವರು ತಮ್ಮ ಎಕ್ಸ್ (ಈಮುಂಚೆ ಟ್ವಿಟರ್ ಎನ್ನಲಾಗುತ್ತಿತ್ತು) ಖಾತೆಯಲ್ಲಿ ಮೇನಕಾ ಗಾಂಧಿ ಹೇಳಿರುವ ಒಂದು ನಿಮಿಷದ ವೀಡಿಯೋ ಹಂಚಿಕೊಂಡಿದ್ದಾರೆ.
ಮೇನಕಾ ಗಾಂಧಿ ಎಲ್ಲಿ ಯಾವಾಗ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….