ಬೆಂಗಳೂರು, (ಸೆ.15): ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಕಾವೇರಿ ಜಲಾನಯನ ಪ್ರದೇಶದ ತಾಲೂಕುಗಳಲ್ಲಿ ಕಾವೇರಿ ರಕ್ಷಣಾ ಯಾತ್ರೆ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರತಿ ಎಕರೆಗೆ 25 ಸಾವಿರ ಪರಿಹಾರ: ರಾಜ್ಯ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ರೈತರ ಬೆಳೆಗಳಿಗೆ ಸೂಕ್ತ ಸಮಯದಲ್ಲಿ ನೀರು ಬಿಡದೇ ಇರುವುದರಿಂದ ರೈತರ ಬೆಳೆ ಒಣಗಿದ್ದು, ಕಾವೇರಿ ಕೊಳ್ಳದ ರೈತರಿಗೆ ಪ್ರತೀ ಎಕರೆಗೆ 25 ಸಾವಿರ ರೂ ಪರಿಹಾರ ಕೊಡುವಂತೆ ನಾವು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು
ನೀರು ಬಿಟ್ಟರೆ ಬಿಜೆಪಿಯಿಂದ ಕಾವೇರಿ ಜಲಾನಯನ ಪ್ರದೇಶಗಳ ಎಲ್ಲ ತಾಲ್ಲೂಕುಗಳಲ್ಲೂ ಕಾವೇರಿ ಜನ ಜಾಗೃತಿ ಯಾತ್ರೆ ಮಾಡಲು ನಿರ್ಧಾರಿಸಲಾಗಿದೆ. ಪಾದಯಾತ್ರೆ, ಸತ್ಯಾಗ್ರಹ, ಪ್ರತಿಭಟನೆ ರೂಪದಲ್ಲಿ ಹೋರಾಟ ನಡೆಸಲಾಗುವುದು. ಸೆಪ್ಟಂಬರ್ 21 ರಂದು ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು, ಸೆ. 21 ರಂದು ಹೋರಾಟದ ಮುಂದಿನ ರೂಪುರೇಷೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಕೇಂದ್ರದ ಮಧ್ಯಸ್ಥಿಕೆ ಅಗತ್ಯವಿಲ್ಲ: ರಾಜ್ಯ ಸರ್ಕಾರ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದೆ. ಇದರಲ್ಲಿ ಕೇಂದ್ರದ ಮಧ್ಯಸ್ಥಿಕೆ ಅಗತ್ಯ ಏನಿದೆ? ರಾಜ್ಯ ಸರ್ಕಾರ ಎಲ್ಲದಕ್ಕೂ ಕೇಂದ್ರವನ್ನು ಎಳೆದು ತರುವುದನ್ನು ಬಿಡಲಿ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವ ಮೂಲಕ ಕಂಟು ನೆಪ ಹುಡುಕುತ್ತಿದೆ. ಕೇಂದ್ರದ ಬದಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜತೆ ಈ ಸರ್ಕಾರ ಪತ್ರ ವ್ಯವಹಾರ ನಡೆಸಲಿ. ಡಿಎಂಕೆ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷ. ಕಾವೇರಿ ವಿಚಾರಕ್ಕೆ ಇವರು ಸ್ಟಾಲಿನ್ ಗೆ ಪತ್ರ ಬರೆಯಲಿ ನೋಡೋಣ ಎಂದು ಸವಾಲು ಹಾಕಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….