ದೊಡ್ಡಬಳ್ಳಾಪುರ, (ಸೆ.08): ನಗರದಲ್ಲಿ ಕಳೆದ ಒಂದು ವಾರದಿಂದ ರಸ್ತೆ ಬದಿ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸುತ್ತಿರುವುದನ್ನು ಖಂಡಿಸಿ ಇಂದು ವ್ಯಾಪಾರಿಗಳು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.
ಬೀದಿ ಬದಿ ವ್ಯಾಪಾರಿಗಳ ಹೋರಾಟ ಸಮಿತಿ ಹಾಗೂ ಸಿಐಟಿಯು ನೇತೃತ್ವದಲ್ಲಿ ಟಿ.ಬಿ ವೃತ್ತದಿಂದ ಮೆರವಣಿಗೆ ಮೂಲಕ ನಗರಸಭೆಗೆ ತೆರಳಕ ದಿಕ್ಕಾರ ಕೂಗಿ, ಕಚೇರಿ ಮುಂದೆ ಧರಣಿ ನಡೆಸಿದರು.
ಈ ವೇಳೆ ಸಿಐಟಿಯುನ ಜಿಲ್ಲಾಧ್ಯಕ್ಷ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ನಗರಸಭೆ ಆಯುಕ್ತರು, ಪಟ್ಟಣ ವ್ಯಾಪಾರ ಸಮಿತಿಯ ಸಭೆಯನ್ನು ಕರೆದು ಒಂದು ವರ್ಷಗಳ ಅಂತರವಾಗಿದೆ, ಈ ಸಮಿತಿಗೆ ನಗರಸಭೆ ಆಯುಕ್ತರೇ ಅಧ್ಯಕ್ಷರಾಗಿರುತ್ತಾರೆ, ಆದರೂ ಸಭೆ ಕರೆಯದೇ ನಿರ್ಲಕ್ಷ್ಯ ಮಾಡಿರುವುದು ಖಂಡನೀಯ ಎಂದರು.
ನಗರಸಭೆ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಏಕಾ ಏಕಿ ಅಂಗಡಿಗಳನ್ನು ತೆರವುಗೊಳಿಸಿರುವುದು ಖಂಡನೀಯ. ಈ ಮೊದಲು ತಳ್ಳುವ ಗಾಡಿ ಮೂಲಕ ವ್ಯಾಪಾರ ಮಾಡುತ್ತಿದ್ದರು.
ತಮ್ಮ ರಕ್ಷಣೆಗೋಸ್ಕರ ಸಾಲ ಮಾಡಿ ವ್ಯಾಪಾರಸ್ಥರು ಸಾವಿರಾರು ರುಪಾಯಿ ಖರ್ಚು ಮಾಡಿ ಪೆಟ್ಟಿ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡಿದ್ದರು,ಆದರೆ ಅಧಿಕಾರಿಗಳು ಇದನ್ನು ಲೆಕ್ಕಿಸದೆ ಜೆಸಿಬಿಗಳ ಮೂಲಕ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಇದರಿಂದಾಗಿ ವ್ಯಾಪಾರಸ್ಥರು ಬೀದಿ ಪಾಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷವೇ ನಗರಸಭೆ ಆಯುಕ್ತರಿಗೆ ಬೀದಿ ಬದಿ ವ್ಯಾಪಾರಿಗಳನ್ನು ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಒಕ್ಕಲೆಬ್ಬಿಸಬಾರದು. ನಗರದಲ್ಲಿ ಅಗತ್ಯವಿರುವ 7 ಕಡೆ ವ್ಯಾಪಾರಿ ವಲಯವನ್ನು ಸ್ಥಾಪಿಸಿ, ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದೆವು, ಆದರೆ, ನಮ್ಮ ಮನವಿಗೆ ಸ್ಪಂದಸಿದ ನಗರ ಸಭೆ ಇದೀಗ ಏಕಾ ಏಕಿ ತೆರವು ಕಾರ್ಯ ನಡೆಸುತ್ತಿರುವುದು ವ್ಯಾಪಾರಸ್ಥರ ಮೇಲೆ ನಡೆಸುತ್ತಿರುವ ದೌರ್ಜನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಪತ್ರ ಸ್ವೀಕರಿಸಿದ ನಗರಸಭೆ ಪೌರಾಯುಕ್ತ ಪರಮೇಶ್ ಮಾತನಾಡಿ, ಲೋಕೋಪಯೋಗಿ ಇಲಾಖೆ, ಪೋಲಿಸ್ ಇಲಾಖೆ ಹಾಗೂ ನಗರಸಭೆ ಅಧ್ಯಕ್ಷರು, ಸದಸ್ಯರ ಜೊತೆ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದಾಗಿ ಭರವಸೆ ನೀಡಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….