ಬೆಂ.ಗ್ರಾ.ಜಿಲ್ಲೆ, (ಸೆ.08): ವಿದ್ಯಾರ್ಥಿಗಳು ನಿಮ್ಮ ನೆರೆಹೊರೆಯ ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ನೀಡಿ ಅವರನ್ನು ಅಕ್ಷರಸ್ಥರನ್ನಾಗಿ ಮಾಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಇಲಾಖೆ ಮತ್ತು ಡಯಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ 57 ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ, ದೀಪ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಾಕ್ಷರತೆ ಕಲಿಕೆ ಕಾರ್ಯಕ್ರಮವನ್ನು ಪಂಚವಾರ್ಷಿಕ ಯೋಜನೆಗಳು ಜಾರಿಯಾದ ಸಂದರ್ಭದಲ್ಲಿ ಜಾರಿಗೆ ತರಲಾಯಿತು. ವಿದ್ಯಾವಂತರು ವಯಸ್ಕ ಅನಕ್ಷರಸ್ಥರನ್ನು ದತ್ತು ಪಡೆದು ಅವರಿಗೆ ಅಕ್ಷರ ಜ್ಞಾನ ನೀಡುವುದು ಇದರ ಉದ್ದೇಶವಾಗಿತ್ತು. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಜನರು ಶಿಕ್ಷಣ ವಂಚಿತರಾಗುತ್ತಿದ್ದರು. ಅಂತಹ ಅನಕ್ಷರಸ್ಥರನ್ನು ಗುರ್ತಿಸಿ ಶಿಕ್ಷಣವನ್ನು ನೀಡಬೇಕು. ಜಿಲ್ಲೆಯಲ್ಲಿ ಶೇಕಡ 87.22ರಷ್ಟು ಜನರು ವಿದ್ಯಾವಂತರಿದ್ದಾರೆ. ಇನ್ನುಳಿದಂತಹ ಅನಕ್ಷರಸ್ಥರನ್ನು ವಿದ್ಯಾವಂತರನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣ ವಂಚಿತ ವಯಸ್ಕ ಅನಕ್ಷರಸ್ಥರನ್ನು ದತ್ತು ಪಡೆದು ಅವರಿಗೆ ಅಕ್ಷರ ಜ್ಞಾನ ತುಂಬಬೇಕು ಎಂದು ಹೇಳಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ವಿಶ್ವನಾಥಪುರದಲ್ಲಿ ಸಾಕ್ಷರತಾ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಸಾಕ್ಷರತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನವ ಸಾಕ್ಷರರನ್ನು ಹಾಗೂ ಸಾಕ್ಷರತಾ ಸಂಪನ್ಮೂಲ ವ್ಯಕ್ತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಶಿಕ್ಷಕ ಸಿ ವಿ ಲೋಕೇಶ್ ತಂಡದವರಿಂದ ಸಾಕ್ಷರಗೀತೆಗಳು ಮೂಡಿಬಂದವು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಶ್ರೀಕಂಠ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಶಿಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನಿಲ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ್, ದೇವನಹಳ್ಳಿ ಬಯಲು ಕಾರಾಗೃಹ ಅಧೀಕ್ಷಕರಾದ ಮೋಹನ್ ಕುಮಾರ್, ದೊಡ್ಡಬಳ್ಳಾಪುರ ತಾಲ್ಲೂಕು ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಕೆ.ಜೈಕುಮಾರ್, ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ.ವಿ. ರಾಜಕುಮಾರ್ ಕಾರ್ಯಕ್ರಮ ಸಂಯೋಜಕಿ ಪುಷ್ಪಾ ಮತ್ತಿತರರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….