ಹುಬ್ಬಳ್ಳಿ, (ಆ.28): ಬಿಜೆಪಿಯಲ್ಲಿನ ವ್ಯವಸ್ಥೆಯಿಂದ ಬಹಳಷ್ಟು ಜನ ನೊಂದು ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ. ಸ್ವ ಇಚ್ಛೆಯಿಂದ ಪಕ್ಷದಿಂದ ಪಕ್ಷಕ್ಕೆ ಹೋದರೆ ಅದು ಆಪರೇಷನ್ ಅಲ್ಲ ಅದನ್ನು ಆಪರೇಷನ್ ಹಸ್ತ ಎನ್ನುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಿಂದ ಕಾಂಗ್ರೆಸ್ ಗೆ ಹತ್ತು, ಇಪ್ಪತ್ತು ಅಥವಾ 30 ಜನ ಬರಬಹುದು. ಆದರೆ ಯಾರ ಹೆಸರನ್ನು ಹೇಳೋಕೆ ಆಗಲ್ಲ. ಬಿಜೆಪಿಯ ಹಲವಾರು ನಾಯಕರು, ತಳ ಮಟ್ಟದ ಕಾರ್ಯಕರ್ತರು ಕರೆ ಮಾಡಿ ಅಸಮಾಧಾನ, ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಈಗ ಅವರ ಹೆಸರು ಹೇಳಿದ್ರೆ ಅವರಿಗೆ ತೊಂದರೆ ಆಗುತ್ತದೆ. ಸಮಯ ಬಂದಾಗ ಹೇಳ್ತಿನಿ ಎಂದು ಶೆಟ್ಟರ್ ಹೇಳಿದರು.
ಹಲವಾರು ನಾಯಕರು ಬಿಜೆಪಿಯಿಂದ ನೊಂದು ಕಾಂಗ್ರೆಸ್ ಗೆ ಸೇರುತ್ತಿದ್ದಾರೆ. ಬಿಜೆಪಿ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ನಾಯಕನಿಲ್ಲದೆ ಸೊರಗುತ್ತಿದೆ. ರಾಜ್ಯದ ಅಧ್ಯಕ್ಷರ ಅವಧಿ ಮುಗಿದರೂ ಇದುವರೆಗೂ ಹೊಸ ನೇಮಕ ಮಾಡಲಾಗುತ್ತಿಲ್ಲ ಅವರಿಗೆ. ಈ ರೀತಿ ಶೋಚನಿಯ ಪರಿಸ್ಥಿತಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಬಂದಿರಲಿಲ್ಲ ಎಂದರು.
ಹಿಂದೊಮ್ಮೆ ಬಸವರಾಜ್ ಹೊರಟ್ಟಿ ಅವರಿಗೆ ಚೀಟಿ ಎತ್ತಿ ತಾತ್ಕಾಲಿಕವಾಗಿ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದಿದ್ದೆ. ರಾಜ್ಯದ ಬಿಜೆಪಿ ನಾಯಕರ ಮೇಲೆ ನಂಬಿಕೆ ಕೇಂದ್ರದವರಿಗೆ ಹೋಗಿದೆ ಎಂದು ಹೇಳಿದರು.
ಮುನೇನಕೊಪ್ಪ ಅವರು ಪ್ರೆಸ್ ಮೀಟ್ ಕರೆದದ್ದು ನನಗೆ ಗೊತ್ತಿಲ್ಲ. ನಾನು ಈ ಬಗ್ಗೆ ಅವರೊಂದಿಗೆ ಮಾತನಾಡಿಲ್ಲ. ಈ ಬಗ್ಗೆ ನಾನು ಏನು ಹೇಳೋಕೆ ಸಾಧ್ಯವಿಲ್ಲ ಯಾಕೆ ಕರೆದಿದ್ದಾರೆ ಎಂದು ಅವರೇ ಹೇಳಬೇಕು ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….