ಬೆಂಗಳೂರು, (ಜುಲೈ13): “ನನ್ನ ಸುದೀರ್ಘ ರಾಜಕಾರಣ ಜೀವನದಲ್ಲಿ ವರ್ಗಾವಣೆಯಲ್ಲಿ ಭ್ರಷ್ಟಾಚಾರವಾಗಿದೆ ಎಂಬ ಯಾವ ಹಗರಣ, ಆರೋಪಗಳೂ ಇಲ್ಲ. ಸರ್ಕಾರ ರಚನೆಯಾದ ಮೊದಲನೇ ದಿನವೇ ಯಾವ ಕಾರಣಕ್ಕೂ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೀಬಾರದು ಎಂದು ಸ್ಪಷ್ಟವಾಗಿ ನಮ್ಮ ಸಚಿವರಲ್ಲಿ ಮನವಿ ಮಾಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಯಾರಾದರೂ ಒಬ್ಬರು, ನನ್ನ ಮೇಲೆ ಈವರೆಗೆ ಆರೋಪ ಮಾಡಿಲ್ಲ. ಲಂಚ ತೆಗೆದುಕೊಂಡಿದ್ದೇನೆ ಎಂದು ಯಾರಾದರೂ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮ್ಯಯ್ಯ ತಿಳಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿ ಅವರು ಮಾತನಾಡಿದರು.
ಸರ್ಕಾರದ ಎರಡು ತಿಂಗಳ ಅವಧಿಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಜೆಡಿಎಸ್ ಟೀಕೆ ಮಾಡಿದ್ದಾರೆ. ವರ್ಗಾವಣೆ ಸಹಜ ಪ್ರಕ್ರಿಯೆ. ಎಲ್ಲಾ ಕಾಲದಲ್ಲಿಯೂ ಆಗಿದೆ. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ತುಸು ಹೆಚ್ಚು ವರ್ಗಾವಣೆಗಳು ಆಗಿರಬಹುದು. ಹಿಂದಿನ ಸರ್ಕಾರ ಅಧಿಕಾರಿಗಳನ್ನು ಬದಲಾಯಿಸಿ ಎಂದಿರಬಹುದು, ಆಡಳಿತದ ಕಾರಣದಿಂದ ಮಾಡಿರಬಹುದು. ನಾವು ಆಡಳಿತದ ದೃಷ್ಟಿಯಿಂದ ಮಾಡಿದ್ದೇವೆ. ವರ್ಗಾವಣೆಯಾದ ಕೂಡಲೇ ಧಂಧೆ ನಡೆದಿದೆ, ವ್ಯಾಪಾರ ನಡೆದಿದೆ ಎನ್ನುವುದು ಹಾಸ್ಯಾಸ್ಪದ, ಸತ್ಯಕ್ಕೆ ದೂರವಾದುದು.
ವರ್ಗಾವಣೆಯಲ್ಲಿ ದಂಧೆ ನಡೆದಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪವನ್ನು ಮುಖ್ಯಮಂತ್ರಿಗಳು ಖಂಡತುಂಡವಾಗಿ ಅಲ್ಲಗಳೆಯುತ್ತೇನೆ ಎಂದರು.
ನನ್ನ ಇಲಾಖೆಯಲ್ಲಿ ಇನ್ನೂ ಒಂದೂ ವರ್ಗಾವಣೆಯನ್ನೂ ಮಾಡಿಲ್ಲ. ಬಜೆಟ್ ಸಿದ್ಧತೆಗಳಿಂದಾಗಿ ವರ್ಗಾವಣೆಗೆ ಸಮಯವಿರಲಿಲ್ಲ. ನನ್ನ ಇಲಾಖೆಗಳಲ್ಲಿ ಭ್ರಷ್ಟಾಚಾರ ಆಗಿಲ್ಲ. ನನಗೆ ಗೊತ್ತಿದ್ದೂ ಭ್ರಷ್ಟಾಚಾರ ಆಗಲು ಸಾಧ್ಯವಿಲ್ಲ. ಭ್ರಷ್ಟಾಚಾರದ ಅರೋಪಗಳು ಕಪೋಲಕಲ್ಪಿತ ಎಂದರು.
“5 ಗ್ಯಾರಂಟಿಗಳನ್ನು ನಾವು ಚುನಾವಣಾ ಸಂದರ್ಭದಲ್ಲಿ ನಮ್ಮ ಘೋಷಣೆ ಮಾಡಿದ್ದು, ನಾವು ನೀಡಿದ್ದ ಭರವಸೆ ಈಡೇರಿಸಿದ್ದೇವೆ. ವಿಪಕ್ಷಗಳಿಗೆ ರಾಜಕೀಯ ಅಭದ್ರತೆ ಶುರುವಾಗಿರಬೇಕು. ಅದು ಶುರವಾದಾಗ ನಮ್ಮ ಮನಸ್ಥಿತಿಗಳು ಬದಲಾವಣೆಯಾಗುತ್ತದೆ. ಭಯ ಅಥವಾ ರಾಜಕೀಯ ಅಭದ್ರತೆಯಿಂದ ಆರೋಪ ಮಾಡಿ ದಾರಿ ತಪ್ಪಿಸುವ ಪ್ರಯತ್ನ ಮಾಡಿರಬಹುದು” ಎಂದರು.
ಅಕ್ರಮಗಳ ಬಗ್ಗೆ ತನಿಖೆ: ಹಿಂದಿನ ಸರ್ಕಾರದಲ್ಲಿ ನಡೆದಿದ್ದ ಅಕ್ರಮಗಳ ಬಗ್ಗೆ ತನಿಖೆ ಮಾಡಿಸಲಾಗುತ್ತಿದೆ. 2013 ರಿಂದಲೂ ಮಾಡಿಸಿ ಎಂದು ಮಾಜಿ ಬಸವರಾಜ ಬೊಮ್ಮಾಯಿ ಹೇಳಿದ್ದು ಅವರಿಗೆ ತನಿಖೆ ಕೈಗೊಳ್ಳಿ ಎಂದು ಬಹಳಷ್ಟು ಸಾರಿ ಹೇಳಿದ್ದೇನೆ. ಯಾಕೆ ಮಾಡಿಸಲಿಲ್ಲ. ಅಧಿಕಾರ ಸರ್ಕಾರ ಇವರ ಕೈಲಿ ಇತ್ತಾದರೂ ಅವರು ಮಾಡಿದ ಆರೋಪಗಳ ಬಗ್ಗೆ ದಾಖಲೆಗಳಿರಲಿಲ್ಲ ಅದಕ್ಕೆ ಮಾಡಲಿಲ್ಲ” ಎಂದರು.
ರಾಜ್ಯಪಾಲರ ಭಾಷಣದಲ್ಲಿ ನಮ್ಮ ಸರ್ಕಾರದ ಮುನ್ನೋಟ, ನೀತಿ, ನಿಲುವುಗಳನ್ನು ರಾಜ್ಯಪಾಲರು ಪ್ರಸ್ತಾಪ ಮಾಡಿದ್ದಾರೆ. ಐದು ವರ್ಷಗಳ ಅವಧಿಗೆ ನಮ್ಮ ಸರ್ಕಾರಕ್ಕೆ ಮಾರ್ಗಸೂಚಿ. ರಾಜ್ಯದ ಚುಕ್ಕಾಣಿ ಹಿಡಿದು, ಆಶೋತ್ತರ ನೆರವೇರಿಸಲು ಜನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ತಮ್ಮ ಹಿಂದಿನ ಅವಧಿಯಲ್ಲಿ ಸರ್ಕಾರ ಲೋಕಾಯುಕ್ತ ನಿಷ್ಕ್ರಿಯೆಗೊಳಿಸಿರುವ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ಲೋಕಾಯುಕ್ತ ವನ್ನು ನಾವು ನಿಷ್ಕ್ರಿಯ ಗೊಳಿಸಿಲ್ಲ. ಎಸಿಬಿ, ಬಿಜೆಪಿ ಆಡಳಿತ ಮಾಡುತ್ತಿರುವ 18 ರಾಜ್ಯಗಳಲ್ಲಿ ಇದೆ. ಎಸಿಬಿಯನ್ನು ನಾವು ಲೋಕಾಯುಕ್ತದಿಂದ ಬೇರ್ಪಡಿಸಿದೆವು. ಬಿಜೆಪಿ ನಾವು ಅಧಿಕಾರಕ್ಕೆ ಬಂದ ಕೂಡಲೇ ಎಸಿಬಿ ರದ್ದು ಮಾಡುತ್ತೇವೆ ಎಂದಿದ್ದರು. ಆದರೆ ಅವರು ರದ್ದು ಮಾಡಲಿಲ್ಲ. ಎಸಿಬಿಯನ್ನು ನ್ಯಾಯಾಲಯ ರದ್ದು ಮಾಡಿದ್ದು. ಲೋಕಾಯುಕ್ತ ಇರಲೇ ಇಲ್ಲ ಎನುತ್ತಾರೆ. ಎಸಿಬಿ ರಚನೆಯಾದ ನಂತರ ವಿಶ್ವನಾಥ ಶೆಟ್ಟರು ಲೋಕಾಯುಕ್ತ ಆಗಿದ್ದರು. ಕೋರ್ಟಿನವರು ಎಸಿಬಿಯನ್ನು ರದ್ದು ಮಾಡುವವರೆಗೂ ನೀವು ರದ್ದು ಮಾಡಲಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಸಿಬಿ ಇಲ್ಲವೇ? ಬಿಜೆಪಿ ನಿಲುವು ಏನಾಗಿತ್ತು. ಅಡ್ವೊಕೇಟ್ ಜನರಲ್ ಏನು ಮಾತನಾಡಿದ್ದಾರೆ ಎಂಬುದರ ಪ್ರತಿ ಕೊಡಲೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ನ್ಯಾಯಾಲಯದಲ್ಲಿ ಈ ವಿಚಾರ ಬಂದಾಗ ಸರ್ಕಾರದ ಪರವಾಗಿ ಏನು ಮಾಡಿದ್ದಾರೆ? ಸುಮ್ಮನೆ ಮಾಡುತ್ತಾರಾ? ಸರ್ಕಾರಕ್ಕೆ ಹೇಳದೇ ವಾದ ಮಾಡಲು ಸಾಧ್ಯವೇ? ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಲು ನಾವು ಹೋಗಲಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದಿನ ಸರ್ಕಾರ ಲೋಕಾಯುಕ್ತಕ್ಕೆ ಕೆಲವು ಪ್ರಕರಣ ಗಳನ್ನು ಶಿಫಾರಸ್ಸು ಮಾಡಲಾಗಿದೆ ಎಂದಿದ್ದಾರೆ. ತನಿಖೆಯಾಗಲಿ. ನಮ್ಮ ಅಭ್ಯಂತರವಿಲ್ಲ. ನಮ್ಮ ಕಾಲದಲ್ಲಿ ಹಗರಣಗಳಿಲ್ಲ. ವಿಪಕ್ಷ ಗಳು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದರು.
ಪೊಲೀಸಿನವರು ಲಂಚ ತಿಂದು ನಾಯಿಗಳಂತೆ ಬಿದ್ದಿದ್ದಾರೆ ಎಂದವರು ನೀವು. ಆಮೇಲೆ ಅಲ್ಲಗಳೆದಿದ್ದೀರಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಿಳಿಸಿದ ಮುಖ್ಯ ಮಂತ್ರಿಗಳು, ಇವರ ಮೇಲೆ ನಾವು ಬೇಕಾದಷ್ಟು ಆರೋಪಗಳನ್ನು ಸಾಕ್ಷಿ ಸಮೇತ ಮಾಡಿದ್ದೆವು. ಈಗ ತನಿಖೆ ಮಾಡಿಸಲು ಪ್ರಾರಂಭಿಸಿದ್ದೇವೆ ಎಂದರು.
ಬಿಜೆಪಿಗೆ ಜನ ಎಂದೂ ಆಶೀರ್ವಾದ ಮಾಡಿಲ್ಲ: ಬಿಜೆಪಿ ಯವರು ಯಾವತ್ತಾದರೂ ಜನರ ಆಶೀರ್ವಾದಿಂದ ಅಧಿಕಾರಕ್ಕೆ ಬಂದಿದ್ದಾರಾ? ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಜನರ ಆಶೀರ್ವಾದದಿಂದ ಬಂದಿಲ್ಲ. ಕರ್ನಾಟಕದ ಇತಿಹಾಸದಲ್ಲಿಯೇ ಅವರಿಗೆ ಪೂರ್ಣ ಬಹುಮತ ಬಂದಿಲ್ಲ ಎಂದರು.
ಎರಡು ಅಧಿಕಾರಕ್ಕೆ ಬಂದಾಗಲೂ ಜನರ ಆಶಿರ್ವಾದ ಇತ್ತೇ? ನಿಮ್ಮದು ಇಮ್ಮಾರಲ್ ಗವರ್ನಮೆಂಟ್ ಎಂದ ಮುಖ್ಯಮಂತ್ರಿಗಳು
ಬೊಮ್ಮಾಯಿ ಅವರು ನಾನೇ ಆಪರೇಷನ್ ಹಸ್ತ ನಾನೇ ಮಾಡಿದ್ದು ಎಂದು ಹೇಳಿದ್ದಾರೆ. ನಾನು ಜನತಾ ದಳ ಬಿಟ್ಟು ಬರಲಿಲ್ಲ, ರಾಜಿನಾಮೆನೂ ಕೊಡಲಿಲ್ಲ. ನನ್ನನ್ನು ತೆಗೆದ ಮೇಲೆ ರಾಜಿನಾಮೆ ಕೊಟ್ಟು ಬೈ ಎಲೆಕ್ಷನ್ ನಲ್ಲಿ ಗೆದ್ದೆ. ನಾನು ಅಧಿಕಾರದಲ್ಲಿದ್ದ ಪಕ್ಷಕ್ಕೆ ಹೋಗಲಿಲ್ಲ ನಾನು ಕಾಂಗ್ರೆಸ್ ಸೇರಿದ್ದು ನಂತರದಲ್ಲಿ ಎಂದರು.
ನೈತಿಕತೆಯ ಅಧ: ಪತನ: ರಾಜಕೀಯದಲ್ಲಿ ನೈತಿಕತೆಯ ಅಧ:ಪತನವಾಗಿದೆ. 2018 ರಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದಾಗ,14 ಜನರನ್ನು ಸೆಳೆದು ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಜನ ಇವರಿಗೆ ಆಶೀರ್ವಾದ ಮಾಡಿಲ್ಲ. ಅಧಿಕಾರಕ್ಕೆ ಬಂದು ಮಾಡಬಾರದ್ದು ಮಾಡಿ ಇವತ್ತು ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ. ಅಲ್ಲಿ ಕುಳಿತು ವಿರೋಧ ಪಕ್ಷದ ಕೆಲಸ ಮಾಡಬೇಕು. ಆಡಳಿತ ವಿರೋಧ, ಒಂದೇ ಗಾಡಿಯ ಚಕ್ರಗಳು. ಪ್ರಜಾಪ್ರಭುತ್ವ ಯಶಸ್ವಿಯಾಗಲು ಅವರು ಅಗತ್ಯ ಎಂದರು.
ಜನರಿಗೆ ಅನೇಕ ಭರವಸೆ, ಆಶ್ವಾಸನೆ ಕೊಟ್ಟು, ಜನ ಅಧಿಕಾರಕ್ಕೆ ತಂದಿದ್ದಾರೆ. 2018 ರಲ್ಲಿ ಸೋತಿದ್ದು ನಿಜ. ನಿಮಗೆ ಜನ ಅಧಿಕಾರ ಕೊಟ್ಟರಾ. ಆಗ ಬಂದಿದ್ದು ಫ್ರಾಕ್ಚರ್ಡ್ ವರ್ಡಿಕ್ಟ್ ಅದನ್ನು ನಾವು ಒಪಿದ್ದೆವು ಎಂದರು. ಕೋಮುವಾದಿ ಸರ್ಕಾರ ಅಧಿಕಾರಕ್ಕೆ ಬರಬಾರದು ಎಂದು ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆವು ಎಂದರು.
ಈ ಬಾರಿ ಜನರು ನಮಗೆ 42.9 % ಮತ ನೀಡಿದ್ದಾರೆ. ಬಿಜೆಪಿಗೆ 36% ಕೊಟ್ಟಿದ್ದಾರೆ. ಬಿಜೆಪಿ ವೋಟ್ ಡಿಕ್ಲೈನ್ ಆಗಿದೆಯೇ ಹೊರತು ಹೆಚ್ಚಾಗಿಲ್ಲ. ನಮ್ಮ ಮತಗಳು ಹೆಚ್ಚಾಗಿದೆ. ಈ ಬಾರಿ ಸಂಪೂರ್ಣ ಆಶೀರ್ವಾದ ಮಾಡಿದ್ದಾರೆ. ಭಾಗ್ಯಗಳನ್ನು ಕೊಟ್ಟ ನಮಗೆ ಪುನ: ಜನ ಆಶೀರ್ವಾದ ಮಾಡಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮದ ಬಗ್ಗೆ , ಧರ್ಮಸ್ಥಳದ ಧರ್ಮಾಧ್ಯಕ್ಷ ವೀರೇಂದ್ರ ಹೆಗ್ಗಡೆಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನ್ನಭಾಗ್ಯ ಇದ್ದದ್ದಕ್ಕೆ ಕೋವಿಡ್ ಸಂದರ್ಭದಲ್ಲಿ ಜನ ಬದುಕಿದ್ದಾರೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ಬಿಜೆಪಿಗೆ ಮತ ಹಾಕ ಜನ ಪಶ್ಚಾತ್ತಾಪಪಟ್ಟಿದ್ದಾರೆ. ಪೆಟ್ರೋಲ್, ಡೀಸಲ್, ಆಹಾರ, ಗೊಬ್ಬರ, ಗ್ಯಾಸ್ ಬೆಲೆ ಗಗನಕ್ಕೇ ರಿ ಜನ ತತ್ತರಿಸಿದ್ದರು. ಅದಕ್ಕಾಗಿಯೇ 5 ಗ್ಯಾರಂಟಿಗಳನ್ನು ಘೋಷಿಸಿದೆವು.
ಈ ಯೋಜನೆಗಳ ಬಗ್ಗೆ ಪ್ರಧಾನಿಗಳು ಆರ್ಥಿಕವಾಗಿ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಬಿಜೆಪಿಯವರೂ ಕೂಡ ಇದ್ದನ್ನು ಹೇಳಿದ್ದಾರೆ. ರಾಜ್ಯವನ್ನು ಯಾರು ಆರ್ಥಿಕವಾಗಿ ಹೇಗೆ ದಿವಾಳಿಯಾಯ್ತು ಎಂದು ಬಜೆಟ್ ಮೇಲೆ ಮಾತಾಡುವ ಸಂದರ್ಭದಲ್ಲಿ ವಿವರಿಸುವೆ ಎಂದ ಅವರು, ಕಳೆದ ಬಾರಿ ನಾವು 165 ಭರವಸೆಗಳನ್ನು ಕೊಟ್ಟಿದ್ದೆವು. ಈ ಪೈಕಿ 158 ಭರವಸೆಗಳನ್ನು ಈಡೇರಿಸಿದೆವು. 600 ಭರವಸೆ ನೀಡಿ ಎಷ್ಟು ಭರವಸೆ ಈಡೇರಿಸಿದ್ದಾರೆ ಎಂದು ಬಿಜೆಪಿ ಹೇಳಲಿ. 10% ಕೂಡ ಅವರಿ ಈಡೇರಿಸಲಿಲ್ಲ. ಅದರ ಬದಲಿ ಜನವಿರೋಧಿ ಕಾರ್ಯಕ್ರಮ ಕೊಟ್ಟರು. ಷರತ್ತುಗಳನ್ನು ಹಾಕಿದ್ದೀರಿ ಎಂದು ಈಗ ಚಳವಳಿ, ಪ್ರತಿಭಟನೆ ಮಾಡುತ್ತಾರೆ. ಈ ಬಜೆಟ್ ನಲ್ಲಿ 5 ಗ್ಯಾರಂಟಿ ಗಳನ್ನು ಜಾರಿಗೆ ಕೊಡುವ ಘೋಷಣೆ ಮಾಡಿ ಅನುದಾನ ಒದಗಿಸಿದ್ದೇನೆ. ಇದಕ್ಕೆ ಎಲ್ಲಿಂದ ದುಡ್ಡು ತರುತ್ತಾರೆ? ಹೇಗೆ ಜಾರಿಗೆ ತರುತ್ತಾರೆ ಎಂದು ಬಿಜೆಪಿ ಯವರು ಮಾತನಾಡುತ್ತಿದ್ದರು.
4000 ಬಸ್ಸುಗಳ ಖರೀದಿ: ಈಗಾಗಲೇ 5 ರ ಪೈಕಿ ಮೂರು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಶಕ್ತಿ ಯೋಜನೆಯನು ಜೂನ್ 11 ರಿಂದ ಜಾರಿಗೆ ಕೊಟ್ಟಿದ್ದೇವೆ. ಈ ರಾಜ್ಯದ ಹೆಣ್ಣುಮ್ಕಳು ಖುಷಿಯಾಗಿದ್ದಾರೆ. ಇವರಿಗೆ ಮಾತ್ರ ಅಸಂತೋಷ. 49.6 ಲಕ್ಷ ಮಹಿಳೆಯರು ಪ್ರತಿನಿತ್ಯ ಓಡಾಡುತ್ತಿದ್ದಾರೆ. ಉಚಿತ ಬಸ್ಸುಗಳ ಪ್ರಯಾಣ ಹೆಚ್ಚಾಗಿ ನಮ್ಮ ಆದಾಯ ಕೂಡ ಜಾಸ್ತಿಯಾಗಿದೆ. ಕೆಎಸ್‍ಆರ್ ಟಿ ಸಿ ಯಲ್ಲಿ ಪ್ರಯಾಣ ಮಾಡಿರುವ ಟಿಕೆಟ್ ದರವನ್ನು ಸಾರಿಗೆ ಸಂಸ್ಥೆಗೆ ಸರ್ಕಾರ ಕಟ್ಟಿಕೊಡಲಿದೆ. ಈ ಬಗ್ಗೆ ಸಂಶಯ ಬೇಡ ಎಂದರು. 2800 ಕೋಟಿ ರೂ.ಗಳನ್ನು ಸಾರಿಗೆ ಸಂಸ್ಥೆಗೆ ಒದಗಿಸುತ್ತೇವೆ. 13 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲು ತೀರ್ಮಾನ ಮಾಡಿದ್ದು 4000 ಹೊಸ ಬಸ್ಸುಗಳನ್ನು ಖರೀದಿ ಮಾಡಲಾಗುವುದು ಎಂದರು.
ಪುರುಷರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು. ಈ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಜಾರಿಯಾಗುತ್ತಿದೆ. ಷರತ್ತುಗಳನ್ನು ಹಾಕಿದ್ದೇವೆ. ಘೋಷಣೆ ಮಾಡಿದಾಗ ಷರತ್ತುಗಳನ್ನು ಹಾಕಿ ವಿವರ ನೀಡಲಾಗುವುದಿಲ್ಲ. ಈಗ ಮಾಡಿದ್ದೇವೆ. ಮಹಿಳೆಯರು ಖುಷಿಯಾಗಿದ್ದಾರೆ. 50 ಕೋಟಿ ಮಹಿಳೆಯರ ಸಬಲೀಕರಣದ ಕಾರ್ಯಕ್ರಮವಲ್ಲವೇ? ಆ ದುಡ್ಡು ಉಳಿದರೆ, ದೇವಸ್ಥಾನ, ತವರು ಮನೆ, ಸ್ನೇಹಿತರ ಮನೆಗೆ ಹೋಗುತ್ತಾರೆ. ಹೊರಗೆ ಹೋಗುತ್ತಿದ್ದಾರೆ. ಆನರಿಗೆ ದುಡ್ಡಿರಬೇಕು. ಅದಿದ್ದರೆ ತಾನೇ ಹೊರಗೆ ಹೋಗುತ್ತಾರೆ? ಅದರಿಂದ ತೆರಿಗೆ ಬರುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ. ಜಿಡಿಪಿ ಬೆಳವಣಿಗೆಯಾಗುತ್ತದೆ. ಅದಕ್ಕೆ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಕರೆಯಲಾಗಿದೆ ಎಂದು ವಿವರಿಸಿದರು.
ಅಧಿಕಾರಕ್ಕೆ ಬಂದ ಕೂಡಲೇ 10 ಜನ ಪ್ರಮಾಣ ವಚನ ಸ್ವೀಕಾರ ಮಾಡಿ ಸಂಪುಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕ್ಕೆ ತೀರ್ಮಾನ ಮಾಡಿ, ಮುಂದಿನ ಸಂಪುಟ ಸಭೆಯಲ್ಲಿಅದರ ರೂಪುರೇಷೆಗಳನ್ನು ಮಾಡಿದೆವು.
ಗೃಹಜ್ಯೋತಿ ಹಾಗೂ ಗೃಹ ಲಕ್ಷ್ಮಿ ಯೋಜನೆಯಲ್ಲಿ ತಾಂತ್ರಿಕ ಗೊಂದಲಗಳಿದ್ದರೆ ನಿವಾರಣೆ ಮಾಡುತ್ತೇವೆ. 100 ಕ್ಕೆ 100 ಗೊಂದಲ ನಿವಾರಣೆ ಮಾಡಲಾಗುವುದು. ನಮ್ಮ ಉದ್ದೇಶ ಸಾರ್ಥಕವಾಗಬೇಕು. ಅತ್ತೆ ಸೊಸೆಗೆ ಜಗಳ ತಂದಿಟ್ಟಿದ್ದೀರಿ ಎಂಬ ಗೊಂದಲಗಳನ್ನು ಬಿಜೆಪಿ ಸ್ವಲ್ಪ ನಿರ್ಮಾಣ ಮಾಡುತ್ತಿದೆ ಎಂದ ಸಿಎಂ, 1.28 ಕೋಟಿ ಬಿಪಿಎಲ್/ ಎಪಿಎಲ್ ಕಾರ್ಡುದಾರರಿದ್ದಾರೆ. ಈ ಗ್ಯಾರಂಟಿಗಳು 1 ಕೋಟಿ 30 ಲಕ್ಷ ಫಲಾನುಭವಿಗಳಿಗೆ ನೀಡುತ್ತಿದ್ದು, ಒಬ್ಬರಿಗೆ ತಿಂಗಳಿಗೆ 4000-5000 ದೊರೆಯುತ್ತದೆ. 2 ಸಾವಿರ ನೀಡಿರುವುದರಿದ ದುಡ್ಡು ಸಿಕ್ಕು ಆರ್ಥಿಕ ಚಟುವಟಿಕೆ ಬೆಳೆಯುತ್ತದೆ. ಗೃಹಲಕ್ಷ್ಮೀ ಆಗಸ್ಟ್ 16 ರಂದು ಜಾರಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಅಬಕಾರಿ ದರ ಹೆಚ್ಚು ಮಾಡಿರೋದು ನಿಜ. ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 52 ಸಾವಿರ ಕೋಟಿ ರೂ.ಗಳ ಬೇಕು, ಉಳಿದ ಅವಧಿಗೆ 33410 ಕೋಟಿ ಬೇಕು. ಇದನ್ನು ಕ್ರೋಢೀಕರಿಸುವುದು ಹೇಗೆ. ಬಡವರು ಸಾಮಾನ್ಯ ಜನರ ಮೇಲೆ ಭಾರ ಹಾಕದೆ ತೆರಿಗೆ ಕ್ರೋಢೀಕರಿಸಲು ಪ್ರಯತ್ನ ಮಾಡಿದ್ದೇವೆ. 2019 ರಲ್ಲಿ ಗೈಡೆನ್ಸ್ ವ್ಯಾಲ್ಯೂ ಪರಿಷ್ಕರಿಸಲಾಗಿದೆ. . ಮೋಟಾರು ತೆರಿಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನದ ಮೇಲೆ ತೆರಿಗೆ ಹಾಕಲಾಗಿದೆ. ಮೊದಲ ಬಾರಿಗೆ. ರೆವೆನ್ಯೂ ಡಿಫಿಸಿಟ್ ಬಜೆಟ್ ಮಂಡಿಸಿದ್ದೇನೆ. 13 ಬಜೆಟ್ ರೆವೆನ್ಯೂ ಸರ್ಪ್ಲಸ್ ಬಜೆಟ್ ಮಂಡಿಸಲಾಗಿದೆ. 2022-23 ರಲ್ಲಿ 14000 ಕ್ಕೂ ಹೆಚ್ಚು ರೆವೆನ್ಯೂ ಡಿಫಿಸಿಟ್ ಬಜೆಟ್ ಮಂಡಿಸಿದ್ದೀರಿ. ಐದು ಗ್ಯಾರಂಟಿಗಳಿಗೆ ಎಷ್ಟು ದುಡ್ಡು ಅಗತ್ಯವಿದೆಯೋ ಅಷ್ಟು ಹಣ ಕ್ರೋಢೀರಣ ಮಾಡುತ್ತೇವೆ ಎಂದರು
ಜುಲೈ 1 ರಿಂದ ಅನ್ನಭಾಗ್ಯ ಕೊಡಲು ಉದ್ದೇಶವಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ನಮಗೆ ಎಫ್‍ಸಿಐ 1 ಕೆಜಿಗೆ 34 ರೂ.ನಂತೆ ಅಕ್ಕಿ ಕೊಡುತ್ತಾರೆ. ಘೋಷಣೆ ಮಾಡುವ ಮುನ್ನ ಪ್ರಧಾನಮಂತ್ರಿಗಳನ್ನು ಕೇಳಿದ್ದರೆ? ಎನ್ನುವ ಬಿಜೆಪಿ ಪ್ರಶ್ನೆಗೆ ಉತ್ತರಿಸಿ, ರಾಜ್ಯ ಸರ್ಕಾರದ ಯಾವ ಕಾರ್ಯಕ್ರಮ ಘೋಷಣೆಯನ್ನು ಕೇಂದ್ರ ಸರ್ಕಾರ ಕೇಳಿ ಯಾರು ಮಾಡುತ್ತಾರೆ? ನಮಗೆ ರಾಜಕೀಯ ಬದ್ಧತೆ ಇದೆ. ನಿಮಗಿಲ್ಲ ಎಂದರು.
ಕೇಂದ್ರ ಸರ್ಕಾರ ರಾಜಕೀಯ ತೀರ್ಮಾನ ಬಡವರ ವಿರೋಧಿ, ದ್ವೇಷದ ರಾಜಕಾರಣ ಎಂದು ಹೇಳಿದ್ದೇನೆ. ಕೇಂದ್ರ ಸರ್ಕಾರದ ಇ-ಆಕ್ಷನ್ ನಲ್ಲಿ ಯಾರೂ ಭಾಗವಹಿಸಿಯೇ ಇಲ್ಲ. ಕೇಂದ್ರ ಸರ್ಕಾರ ಅಡ್ಡ ಬರುತ್ತಿದೆ. ನೀವು ಹೇಳಬೇಕೋ ಬೇಡವೋ? ನನಗೆ ನೀವೇ ಹೇಳಿಕೊಟ್ಟಿರುವುದು ಕೊಡಬೇಡಿ ಎಂದು . ಒಂದು ದಿನ ಅಕ್ಕಿ ಕೊಡಿ ಎಂದು ಹೇಳಿದ್ದೀರಾ? ಎಂದು ವಿರೋಧ ಪಕ್ಷದವರನ್ನು ಪ್ರಶ್ನಿಸಿದರು.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ದೊರೆಯದ ಕಾರಣ ಎಲ್ಲರಿಗೂ 170 ರೂ.ಕೊಡುತ್ತಿರುವುದು ತಾತ್ಕಾಲಿಕವಾಗಿ ಮಾತ್ರ. ಅಕ್ಕಿ ದೊರೆತ ಕೂಡಲೇ ಅಕ್ಕಿ ವಿತರಿಸುತ್ತೇವೆ ಎಂದರು. ಜನ ಸಂತೋಷವಾಗಿದ್ದಾರೆ. ನಾವು ನುಡಿದಂತೆ ನಡೆಯುತ್ತೇವೆ.
ಯುವನಿಧಿಯನ್ನೂ ಜಾರಿಮಾಡಲು ಹಣ ಮೀಸಲಿಟ್ಟಿದ್ದೇವೆ. ವಿರೋಧ ಪಕ್ಷಗಳು ಒಂದು ಕಡೆ ದಿವಾಳಿಯಾಗುತ್ತೆ ಎನ್ನುತ್ತಾರೆ ಒಂದು ಕಡೆ ಪ್ರತಿಭಟನೆ ಎನ್ನುತ್ತಾರೆ. ಯಡಿಯೂರಪ್ಪ ಒಂದು ಕಾಳು ಕಡಿಮೆಯಾದರೂ ಬಿಡೋಲ್ಲ. ನಾನು 7 ಕೆಜಿ ಕೊಡತ್ತಿದ್ದ ಅಕ್ಕಿಯನ್ನು 5 ಕೆಜಿ ಮಾಡಿದವರು ನಮಗೆ ಪಾಠ ಹೇಳುತ್ತಾರೆ. ವೀರಾವೇಶದ ಭಾಷಣ ಮಾಡುತ್ತಾರೆ. ಬಿಜೆಪಿ ಕೆಟ್ಟ ಆಡಳಿತದಿಂದ ರಾಜ್ಯ ದಿವಾಳಿಯಾಗಿದೆ. ಇವರಿಗೆ ಯಾವ ನೈತಿಕ ಹಕ್ಕಿದೆ ಪ್ರತಿಭಟನೆ ಮಾಡಲು ಎಂದರು. ಅತಿ ಹೆಚ್ಚು ತೆರಿಗೆ ನೀಡುವ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದರು.
ಅನ್ನಭಾಗ್ಯದ ಮೂಲಕ ಸಂವಿಧಾನದ ನಿರ್ದೇಶನ ತತ್ವಗಳನ್ನು ಹಕ್ಕುಗಳನ್ನಾಗಿ ಪರಿವರ್ತಿಸಿ ಕೊಟ್ಟಿದ್ದು ಕಾಂಗ್ರೆಸ್. ರಾಜ್ಯ ಹಸಿವುಮುಕ್ತ ಆಗಬಾರದು ಎಂಬ ದುರುದ್ದೇಶದಿಂದ, ಹಿಂದುಳಿದವರ, ಅಲ್ಪಸಂಖ್ಯಾತರ, ಮಹಿಳೆಯರ ವಿರೋಧಿಯಾದ ಬಿಜೆಪಿ ಯಾವ ಕಾಲದಲ್ಲಿ ಸಾಮಾಜಿಕ ನ್ಯಾಯದ ಪರವಾಗಿದ್ದಾರೆ? ಮುರಳಿ ಮನೋಹರ್ ಜೋಶಿ ಯವರು ಫುಡ್ ಸೆಕ್ಯುರಿಟಿ ಆಕ್ಟ್ ಅಲ್ಲ, ವೋಟ್ ಸೆಕ್ಯುರಿಟಿ ಆಕ್ಟ್ ಎಂದಿದ್ದರು ಎಂದು ಎದುರೇಟು ನೀಡಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….