ದೊಡ್ಡಬಳ್ಳಾಪುರ, (ಜುಲೈ.03): ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಇಚ್ಛಾಶಕ್ತಿ ಕಾಂಗ್ರೆಸ್‍ಗೆ ಇದೆ. ಆದರೆ ಕೇಂದ್ರದ ಮೋದಿ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಈಗ ಬಡವರಿಗೆ ನೀಡಬೇಕಾದ ಅಕ್ಕಿಯನ್ನು ಕಿತ್ತುಕೊಂಡು ಎಥನಾಲ್ ತಯಾರಿಕೆಗೆ ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚುನಾವಣಾ ಪೂರ್ವ ಕಾಂಗ್ರೆಸ್ ಪಕ್ಷ ನೀಡಿರುವ ಐದು ಗ್ಯಾರಂಟಿಗಳನ್ನು ನಿಗದಿತ ಅವಧಿಯಲ್ಲಿಯೇ ಜನರಿಗೆ ತಲುಪಿಸುತ್ತೇವೆ. ಈಗಾಗಲೇ ಎರಡು ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಆದರೆ ಕೇಂದ್ರ ಸರ್ಕಾರದ ಪ್ರಧಾನಿ ಮೋದಿ ಕೇವಲ ಸುಳ್ಳುಗಳನ್ನು ಹೇಳುತ್ತಿದ್ದಾರೆ.
ವಿಶ್ವಸಂಸ್ಥೆಯಲ್ಲಿ 2030 ರ ವೇಳೆಗೆ ಹಸಿವು ಮುಕ್ತ ದೇಶ ನಿರ್ಮಾಣ ನಿರ್ಣಯವಾಗಿದ್ದು. ಈ ನಿರ್ಣಯಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸಹಿ ಹಾಕಿದ್ದು, ನಮ್ಮ ದೇಶದಲ್ಲಿಯೂ ಜಾರಿ ಇದೆ. ಆದರೆ ಕೇಂದ್ರ ಸರ್ಕಾರ ಬಡವರಿಗೆ ನೀಡುವ 29.5 ಲಕ್ಷ ಟನ್ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲು ನೀಡಿದೆ. ಬಡವರ ಹಸಿವಿಗಿಂತ ಇವರಿಗೆ ಎಥೆನಾಲ್ ತಯಾರಿಕೆಯೇ ಮುಖ್ಯವಾಗಿದೆ.
ಇದಲ್ಲದೇ 25 ಸಾವಿರ ಟನ್ ಗೋದಾಮಿನಲ್ಲಿ ಹಾಳಾಗುತ್ತಿದೆ. 15 ಲಕ್ಷ ಟನ್ ಖಾಸಗಿಯಾಗಿ ಮಾರಾಟವಾಗುತ್ತಿದೆ. ಮೋದಿ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ದೇಶದ ಜನಸಾಮಾನ್ಯರ ಖಾತೆಗೆ 15 ಲಕ್ಷ ರೂ ಜಮೆ ಮಾಡುತ್ತೇವೆ ಎಂದು ಹೇಳಿ ಈವರೆಗೆ ಮಾಡಿಲ್ಲ. ಉದ್ಯೋಗ ಸೃಷ್ಟಿ ಎಂದು ಹೇಳಿ ಇದ್ದ ಕೆಲಸಗಳನ್ನು ಕೂಡ ಕಿತ್ತಿಕೊಂಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಶೇ.40 ಕಮಿಷನ್ ಭ್ರಷ್ಟಾಚಾರದಿಂದ ಬೇಸತ್ತ ಜನ ಬಿಜೆಪಿಯನ್ನು ಮಲಗಿಸಿದ್ದಾರೆ. ಬಡವರ ಕೈಗೆ ಹಣ ಕೊಟ್ಟರೆ ದ್ವಿಗುಣವಾಗುತ್ತದೆ. ಆದರೆ ಶ್ರೀಮಂತರಿಗೆ ಕೊಟ್ಟರೆ ದಾಸ್ತಾನು ಆಗುತ್ತದೆ. ಇದಕ್ಕೆ ಶಕ್ತಿ ಯೋಜನೆಯೆ ನಿದರ್ಶನವಾಗಿದೆ. ದಿನದಿಂದ ದಿನಕ್ಕೆ ಸಾರಿಗೆ ನಿಗಮಗಳ ಲಾಭ ಹೆಚ್ಚಾಗ್ತಿದೆ. ದಮ್ಮು ತಾಕತ್ತು ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ಅವರಿಗೆ ಇಲ್ಲದ ನಮ್ಮ ತಾಕತ್ತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತೋರಿಸಲಿದ್ದಾರೆ ಎಂದರು.
ಬಯಲು ಸೀಮೆಗೆ ನೀರುಣಿಸುವ 13 ಸಾವಿರ ಕೋಟಿ ರೂಗಳ ಎತ್ತಿನ ಹೊಳೆ ಯೋಜನೆಗೆ ನಮ್ಮ ಸರ್ಕಾರವಿದ್ದಾಗ ಆದ್ಯತೆ ನೀಡಿತ್ತು. ಆದರೆ ಬಿಜೆಪಿ ಸರ್ಕಾರ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಇನ್ನೂ ಬಾಕಿ ಇದ್ದ 3 ಸಾವಿರ ಕೋಟಿ ರೂ ಹಣ ಸಹ ಬಿಡುಗಡೆ ಮಾಡಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಶುದ್ದೀಕರಿಸಿದ ನೀರು ಹರಿಸುವ ಎಚ್.ಎನ್ ವ್ಯಾಲಿ, ಕೆ.ಸಿ ವ್ಯಾಲಿ, ವೃಷಭಾವತಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಒತ್ತು ನೀಡಿತ್ತು. ಈ ಯೋಜನೆಗಳನ್ನು ಮುಂದುವರೆಸಲು ಬಜೆಟ್‍ನಲ್ಲಿ ಅಗತ್ಯ ಅನುದಾನವನ್ನು ನೀಡುವಂತೆ ಮನವಿ ಮಾಡಲಾಗಿದೆ ಎಂದರು.
ಈ ವೇಳೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್ ಗೌಡ, ಕೆಪಿಸಿಸಿ ಸದಸ್ಯ ಜಿ. ಲಕ್ಷ್ಮೀಪತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಜಗನ್ನಾಥ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬೈರೇಗೌಡ, ಕಸಬಾ ಅಧ್ಯಕ್ಷ ಅಪ್ಪಿ ವೆಂಕಟೇಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರೇವತಿ, ಮುಖಂಡರಾದ ಸಿ.ಡಿ.ಸತ್ಯನಾರಾಯಣಗೌಡ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….