ದೊಡ್ಡಬಳ್ಳಾಪುರ, (ಜೂ.09): ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಚಿಕ್ಕಬೆಳವಂಗಲದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಕ್ಕಬೆಳವಂಗಲದ ಬಳಿಯಲ್ಲಿ ಗ್ರಾಮಕ್ಕೆ ತೆರಳಲು ಅನುಕೂಲವಾಗುವಂತೆ ಅಂಡರ್‍ಪಾಸ್ ನಿರ್ಮಿಸಬೇಕೆಂದು ಒತ್ತಾಯಿಸಿ, ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾಹಿತಿ ನೀಡಿದ ಚಿಕ್ಕಬೆಳವಂಗಲ ಗ್ರಾ.ಪಂ. ಸದಸ್ಯ ಸಿ.ಎಸ್.ಧರ್ಮೇಂದ್ರ, ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಸಿ.ಎಚ್.ರಾಮಕೃಷ್ಣಯ್ಯ ಹೊಸಕೋಟೆಯಿಂದ ದಾಬಸ್‍ಪೇಟೆಯವರೆಗೆ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 207 ರ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದ್ದು, ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಚಿಕ್ಕಬೆಳವಂಗಲದಲ್ಲಿ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನವಾಗಿದೆ. ಇದೇ ಗ್ರಾಮದಲ್ಲಿ ಸುಮಾರು 2 ಸಾವಿರ ಜನಸಂಖ್ಯೆಯಿದ್ದು, 500ಕ್ಕೂ ಹೆಚ್ಚು ದನಕರುಗಳಿವೆ. ಗ್ರಾಮದಲ್ಲಿ ಸರ್ಕಾರಿ ಪಶು ವೈದ್ಯ ಆಸ್ಪತ್ರೆ ಇದ್ದು, ಈ ಆಸ್ಪತ್ರೆಗೆ ಅಕ್ಕ ಪಕ್ಕದ ಗ್ರಾಮಗಳಿಂದ ಈ ಪಶು ಆಸ್ಪತ್ರೆಗೆ ಜಾನುವಾರುಗಳನ್ನು ಚಿಕಿತ್ಸೆಗಾಗಿ ಕರೆತರುತ್ತಿದ್ದಾರೆ.
ಚಿಕ್ಕಬೆಳವಂಗಲ ಗ್ರಾಮದ ಮೂಲಕ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಕೊಳಾಲ, ಕೊರಟಗೆರೆ, ಮಧುಗಿರಿ ತಾಲೂಕುಗಳಿಗೆ ಹಾಗೂ ಮಧುಗಿರಿಯಿಂದ ಬೆಂಗಳೂರು ಕಡೆಗೆ ಮುಖ್ಯರಸ್ತೆಯಾಗಿಲ್ಲ. ಇದರಿಂದ ಚಿಕ್ಕಬೆಳವಂಗಲ ಗ್ರಾಮದ ಜನ ಹಾಗೂ ಜಾನುವಾರುಗಳು ಹಾದುಹೋಗಲು ತೊಂದರೆಯಾಗುತ್ತದೆ. ಈ ದಿಸೆಯಲ್ಲಿ ರಸ್ತೆ ವಿಸ್ತರಣೆ ಮಾಡುವಾಗ ಚಿಕ್ಕಬೆಳವಂಗಲ ಗ್ರಾಮಕ್ಕೆ ಹಾದುಹೋಗಲು ಅಂಡರ್ ಫಾಸ್ ನಿರ್ಮಿಸಿ, ರೈತರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ವಿಜಯ ಕುಮಾರ್, ಗ್ರಾ.ಪಂ ಸದಸ್ಯೆ ಭಾಗ್ಯಮ್ಮ ಚಿಕ್ಕಣ್ಣ, ಮುಖಂಡರಾದ ಸಿ.ಆರ್.ಮುನಿರಾಜು, ಶಿವಕುಮಾರ್, ಮಲ್ಲಿಕಾರ್ಜುನಯ್ಯ, ಹರೀಶ್, ಗೋವಿಂದರಾಜು, ಸದಾಶಿವಯ್ಯ ಮೊದಲಾದವರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….