ದೊಡ್ಡಬಳ್ಳಾಪುರ, (ಮೇ.26): ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ಸಲುವಾಗಿಯೇ ಪೋಕ್ಸೊಓ ಕಾಯ್ದೆ ಜಾರಿಗೆ ತರಲಾಗಿದೆ. ಪ್ರೌಢಶಾಲೆ ಹಂತದಿಂದಲೆ ವಿದ್ಯಾರ್ಥಿಗಳಿಗೆ ಕಾನೂನುಗಳ ಬಗ್ಗೆ ತಿಳುವಳಿಕೆ ನೀಡಿದರೆ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಿಜಯಲಕ್ಷ್ಮೀ ಹೇಳಿದರು.
ಅವರು ಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಊರಿಗೊಂದು ವನ,ಊರಿಗೊಂದು ಕೆರೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ, ಕಾಲೇಜು ಹಂತದಲ್ಲಿ ಮಕ್ಕಳನ್ನು ಮೊಬೈಲ್ ಗೀಳಿನಿಂದ ಸಾಧ್ಯವಾದಷ್ಟೂ ದೂರ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರ ಮೇಲಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬಹುತೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಪರೋಕ್ಷವಾಗಿ ಮಿತಿ ಮೀರಿದ ಮೊಬೈಲ್ ಬಳಕೆಯೇ ಕಾರಣವಾಗಿರುವುದು ತನಿಖೆಯ ವೇಳೆ ಬೆಳಕಿಗೆ ಬರುತ್ತಿವೆ.
ಪೋಕ್ಸೋ ಕಾಯ್ದೆ ಅತ್ಯಂತ ಕಠಿಣವಾಗಿದೆ. ಸಣ್ಣ ತಪ್ಪಿಗು ಸಹ ಗರಿಷ್ಠ ಪ್ರಮಾಣದ ಶಿಕ್ಷೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು, ಪೋಷಕರು ವಿದ್ಯಾರ್ಥಿಗಳ ದಿನ ನಿತ್ಯದ ನಡವಳಿಕೆಯ ಕಡೆಗೆ ನಿಗಾವಹಿಸಬೇಕು. ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸುವ ಗುರುತರವಾದ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಸದಾ ಪಠ್ಯಕ್ಕೆ ಅಂಟಿಕೊಳ್ಳುವುದರಿಂದ ವಿದ್ಯಾರ್ಥಿ ಹೆಚ್ಚಿನ ಅಂಕ ಪಡೆಯಬಹುದು. ಹಾಗೆಯೇ ಉತ್ತಮ ಪ್ರಜೆಯಾಗುವ, ಭೌದ್ಧಿಕ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಲಾ ಮಾತನಾಡಿ, ನಮ್ಮೂರಿನ ಕೆರೆಗಳು ಕಲುಷಿತಗೊಳ್ಳುವುದರಿಂದ ತಪ್ಪಿಸಲು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕಿದೆ. ಕೆರೆಗಳು ಗ್ರಾಮದ ಜೀವನಾಡಿ ಎನ್ನುವ ಸತ್ಯದ ಅರಿವು ಸದಾ ನಮ್ಮಲ್ಲಿ ಇರಬೇಕು ಎಂದರು.
ಈ ವೇಳೆ ಹೊಸಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕರ್ ಸಿದ್ದರಾಜು ಹಾಗೂ ಸಿಬ್ಬಂದಿಗಳು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….