ದೊಡ್ಡಬಳ್ಳಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 2022ನೇ ಇಸವಿಯ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆಯಿತು.
ಇತಿಹಾಸ ತಜ್ಞ ಡಾ.ಎಸ್.ವೆಂಕಟೇಶ್ ಮಾತನಾಡಿ, ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಹಲವಾರು ಮಹನೀಯರು ಪತ್ರಿಕೆಗಳ ಮೂಲಕ ಸಮಾಜವನ್ನು ತಿದ್ದುವ ಮೂಲಕ ಇತಿಹಾಸದಲ್ಲಿ ದಾಖಲಾಗಿರುವುದನ್ನು ನಾವು ಕಾಣಬಹುದಾಗಿದ್ದು, ದೊಡ್ಡಬಳ್ಳಾಪುರದಲ್ಲಿ ರುಮಾಲೆ ಚೆನ್ನಬಸವಯ್ಯನವರು ತಾಯಿನಾಡು ಪತ್ರಿಕೆ ಹೊರತಂದಿದ್ದರು. ಪತ್ರಿಕೆಗಳ ಮೂಲಕ, ಸಮಾಜದ ಓರೆಕೋರೆಗಳನ್ನು ತಿದ್ದುವ, ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದ್ದು, ಸಣ್ಣ ಪತ್ರಿಕೆಗಳು ಈ ದಿಸೆಯಲ್ಲಿ ಹೆಚ್ಚಿನ ಕಾರ್ಯ ಮಾಬಹುದಾಗಿದೆ. ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪತ್ರಿಕೆಗಳ ಪಾತ್ರ ಗಣನೀಯ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಮಾತನಾಡಿ, 90 ವಸಂತಗಳನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪೂರೈಸಿ ರಾಜ್ಯದಲ್ಲಿ ದೊಡ್ಡ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಪತ್ರಿಕೋದ್ಯಮದಲ್ಲಿರುವವರಿಗೆ ಭದ್ರತೆ ಇಲ್ಲವಾಗಿದೆ. ಆಧುನಿಕತೆಯ ದಿನದಲ್ಲಿ ಪತ್ರಕರ್ತರಿಗೆ ಸವಲತ್ತುಗಳು ದೊರಕದಾಗಿದೆ. ಪತ್ರಿಕಾಲಯಗಳು ವ್ಯಾಪಾರಿಕರಣದ ದೃಷ್ಟಿಯಿಂದ ಸೇವಾ ಪತ್ರವನ್ನು ನೀಡದೆ ವಂಚಿಸಲಾಗುತ್ತಿದೆ. ಪತ್ರಿಕೋದ್ಯಮ ಉದ್ಯಮಿಗಳ ಕೈ ಸಿಲುಕಿ ಪತ್ರಕರ್ತರು ಬಸವಳಿಯುವಂತಾಗಿದ್ದು, ಸರ್ಕಾರ ಪತ್ರಕರ್ತರ ನೆರವಿಗೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಪತ್ರಕರ್ತರು ಕಾಳಜಿಯುತ ವೃತ್ತಿ ನಡೆಸಬೇಕಿದೆ. ಅತಿ ಹೆಚ್ಚು ಪತ್ರಿಕೆಗಳನ್ನು ಮಾದ್ಯಮಪಟ್ಟಿಗೆ ಸೇರಿಸದೆ ಜಾಹಿರಾತು ವರಮಾನದ ವಂಚನೆಯಾಗುತ್ತಿದೆ. ಈ ನಿಟ್ಟಿನಲ್ಲಿ ವಾರ್ತಾ ಇಲಾಖೆ ಗಮನ ಹರಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಗಂಗರಾಜ ಶಿರವಾರ ಮಾತನಾಡಿ, ಪತ್ರಕರ್ತರಿಗೆ ಎಲ್ಲರ ಜೊತೆ ಸಂವಹನ ಅಗತ್ಯವಾಗಿದೆ. ಅದೇ ರೀತಿ ಪತ್ರಕರ್ತರ ಸಂಘ ಚಟುವಟಿಕೆಯಿಂದಿರಲು, ಪತ್ರಕರ್ತರ ಒಂದು ವೇದಿಕೆಗೆ ತರಲು ಈ ಕಾರ್ಯಕ್ರಮ ಪೂರಕವಾಗಿದೆ. ಪತ್ರಕರ್ತರಿಗೆ ಕಾರ್ಯಾಲಯ ಹಾಗೂ ನಿವೇಶನ ದೊರಕಿಸಿಕೊಡಲು ನಗರಸಭೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಪತ್ರಕರ್ತರ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಮುರಳಿ ಮೋಹನ್, ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಫೀ ಉಲ್ಲಾ,ಕಾರ್ಯದರ್ಶಿ ಶಾಂತಮೂರ್ತಿ, ನಿಕಟ ಪೂರ್ವ ಕಾರ್ಯದರ್ಶಿ ಆರ್.ರಮೇಶ್,ವಿಶ್ವಾಮಿತ್ರ ಪೌಂಡೇಷನ್ ಅಧ್ಯಕ್ಷ ಹೊಸಕೋಟೆ ಜಿ.ಶ್ರೀನಿವಾಸ್, ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಡಿ.ಶ್ರೀಕಾಂತ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು , ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಪರಮೇಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಶೆಟ್ಟಿ, ಖಜಾಂಚಿ ಜೆ.ಮುನಿರಾಜು, ಉಪಾಧ್ಯಕ್ಷರಾದ ಕೆ.ಸಿ.ರುದ್ರೇಶ್, ಅನ್ನಪೂರ್ಣ,ಆರ್.ಶ್ರೀಧರ್, ಕಾರ್ಯದರ್ಶಿಗಳಾದ ಮುನಿಸ್ವಾಮಿ, ಪಿ.ಶಿವಶಂಕರ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….