ದೊಡ್ಡಬಳ್ಳಾಪುರ: ಸ್ಥಗಿತಗೊಳಿಸಿರುವ ರಾಗಿ ಖರೀದಿ ನೋಂದಣಿಯನ್ನು ಜ.31 ರಿಂದ ಆರಂಭಿಸಬೇಕು. ರಾಗಿ ಖರೀದಿ ಮಿತಿಯನ್ನು ಸಡಿಲಗೊಳಿಸಬೇಕು. ಈ ಬೇಡಿಕೆಗಳು ಈಡೇರದಿದ್ದರೆ ಜ.31 ರಿಂದ ದೇಶದಾದ್ಯಂತ ರೈತ ವಿಶ್ವಾಸ ದ್ರೋಹ ದಿನವನ್ನಾಗಿ ಆಚರಿಸುತ್ತಿರುವ ಸಂದರ್ಭದಲ್ಲಿಯೇ ನಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಗುರುವಾರ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ರೈತ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.
ಕನಸವಾಡಿಗೆ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ವೇಳೆ ಉಂಟಾಗಲಿದ್ದ ಪ್ರತಿಭಟನೆಯನ್ನು ತಡೆಯುವಲ್ಲಿ ಜಿಲ್ಲೆ ಮತ್ತು ತಾಲೂಕು ಅಧಿಕಾರಿಗಳು ಯಶಸ್ವಿಯಾಗಿದ್ದು, ಸಚಿವರು ಬರುವ ಮುಂಚೆಯೇ ರೈತ ಸಂಘಟನೆಗಳ ಮುಖಂಡರನ್ನು ಕರೆಸಿ ಸಭೆ ನಡೆಸಿದಲ್ಲದೆ, ಪ್ರತಿಭಟನೆ ಹೊರತು ಪಡೆಸಿ ಸಚಿವರಿಗೆ ಮನವಿ ಸಲ್ಲಿಸಲು ಅವಕಾಶ ನೀಡುವ ಮೂಲಕ ಕಾರ್ಯಕ್ರಮದ ವೇಳೆ ನಡೆಯಲಿದ್ದ ಪ್ರತಿಭಟನೆಯನ್ನು ತಡೆದಿದ್ದಾರೆ.
ಈ ಕುರಿತಂತೆ ಇಂದು ನಗರದ ತಾಲೂಕು ಕಚೇರಿಯಲ್ಲಿ ನಡೆದ ಸಭೆ ನಡೆಸಿ ರೈತ ಮುಖಂಡರ ಅಹವಾಲುಗಳನ್ನು ಅಧಿಕಾರಿಗಳು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, 2021ರಲ್ಲಿ ಪಂಜಾಬ್ ರಾಜ್ಯದಲ್ಲಿ ರೂ36 ಸಾವಿರ ಕೋಟಿ ವೆಚ್ಚದಲ್ಲಿ ಗೋಧಿ ಸೇರಿದಂತೆ ಇತರೆ ಆಹಾರ ಧಾನ್ಯಗಳನ್ನು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸರ್ಕಾರ ಖರೀದಿ ಮಾಡುವ ಮೂಲಕ ರೈತರ ನೆರವಿಗೆ ನಿಂತಿದೆ. ಆದರೆ ನಮ್ಮ ರಾಜ್ಯದಲ್ಲಿ ಕೇವಲ ರೂ400 ಕೋಟಿ ವೆಚ್ಚದಲ್ಲಿ ಮಾತ್ರ ಬೆಂಬಲ ಬೆಲೆ ಯೋಜನೆಯಲ್ಲಿ ಆಹಾರ ಧಾನ್ಯ ಖರೀದಿ ಮಾಡಲಾಗಿದೆ. ಈ ಸರ್ಕಾರಕ್ಕೆ ರೈತರ ಬಗ್ಗೆ ಗೌರವ ಇಲ್ಲದೇ ಇರುವುದಕ್ಕೆ ಇದು ಸಾಕ್ಷಿಯಾಗಿದೆ. ಮೂರನೇ ದರ್ಜೆ ಆಡಳಿತದಿಂದಾಗಿ ರೈತರು ಇಂದು ಬೀದಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ರಾಜ್ಯದಲ್ಲಿನ ಬಹುತೇಕ ಹಿರಿಯ ಅಧಿಕಾರಿಗಳಿಗೆ ರಾಗಿ ಅಂದರೆ ಯಾವ ರೀತಿಯ ಆಹಾರ ಎನ್ನುವುದೇ ತಿಳಿಯದೇ ಇರುವುದೇ ರಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಉತ್ತರ ಭಾರತದ ರಾಜ್ಯಗಳ ಜನರ ಪ್ರಮುಖ ಆಹಾರವಾಗಿರುವ ಗೋಧಿಯನ್ನು ಎಲ್ಲಾ ರಾಜ್ಯದ ಜನರು ಬಳಸುವಂತೆ ಮಾಡಲಾಗಿದೆ. ಉತ್ತಮ ಆರೋಗ್ಯಕ್ಕೆ ರಾಗಿಯನ್ನು ಪ್ರಮುಖ ಆಹಾರವನ್ನಾಗಿ ಬಳಸುವುದು ಮುಖ್ಯವಾಗಿದೆಯಂದು ಹಲವಾರು ತಜ್ಞ ವೈದ್ಯರು ಹೇಳುತ್ತಲೇ ಇದ್ದರು ದೇಶದ ಇತರೆ ರಾಜ್ಯಗಳಲ್ಲೂ ರಾಗಿ ಬಳಸುವಂತೆ ಮಾಡುವಲ್ಲಿಯೇ ಆಡಳಿತಗಾರರು ಸೋತಿದ್ದಾರೆ. ರಾಗಿಯನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡಲು ದೇಶದ ಇತರೆ ರಾಜ್ಯಗಳಿಗು ವಿಸ್ತರಣೆಯಾಗಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ರೈತ ಸಂಘದ ಮುಖಂಡರು ಮಾತನಾಡಿ, ರಾಗಿ ಖರೀದಿ ಮಿತಿಯನ್ನು ಸಡಿಲಮಾಡುವಂತೆ ಆಗ್ರಹಿಸಿ ನಗರದ ರಾಗಿ ಖರೀದಿ ಕೇಂದ್ರದ ಮುಂದೆ ಒಂದು ವಾರಗಳ ಕಾಲ ರಾತ್ರಿ ಹಗಲು ಧರಣಿ ನಡೆಸಿದ್ದರು ಸೌಜನ್ಯಕ್ಕಾದರು ಜಿಲ್ಲಾಧಿಕಾರಿಗಳು ರೈತರನ್ನು ಭೇಟಿ ಮಾಡಿ ಕಷ್ಟಗಳನ್ನು ವಿಚಾರ ಮಾಡಿ ಸರ್ಕಾರದ ಗಮನಕ್ಕೆ ತಂದಿಲ್ಲ. ರೈತರ ಬಗ್ಗೆ ಗೌರವ ಇಲ್ಲದ ಜಿಲ್ಲಾಧಿಕಾರಿಗಳನ್ನು ಇಲ್ಲಿಂದ ತಕ್ಷಣ ವರ್ಗಾವಣೆ ಮಾಡಬೇಕು. ಇಂದಿನ ಸಭೆಗೂ ಸಹ ಜಿಲ್ಲಾಧಿಕಾರಿಗಳು ಹಾಜರಾಗದೆ ರೈತ ಸಂಘಟನೆಗೆ ಅವಮಾನ ಮಾಡಿದ್ದಾರೆ. ರಾಗಿ ಖರೀದಿ ಮಿತಿ ಸಡಿಲ, ನೋಂದಣಿ ಆರಂಭವಾಗದ ಹೊರತು ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರಿಂದ ರಾಗಿ ಪಡೆಯಬಾರದು. ರೈತರನ್ನು ಹೊಡೆದು ಹಾಳುವ ನೀತಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ರೈತರ ಪ್ರಶ್ನೆಗಳಿಗೆ ಉತ್ತರಿಸಿದ ಉಪವಿಭಾಗಾಧಿಕಾರು ಅರುಳ್ ಕುಮಾರ್, ರಾಗಿ ಖರೀದಿಯಲ್ಲಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಈಗಾಗಲೇ ಚರ್ಚಿಸಲಾಗಿದೆ. ಸರ್ಕಾರದ ಆದೇಶಗಳನ್ನು ಪಾಲಿಸುವುದಷ್ಟೇ ನಮ್ಮ ಕರ್ತವ್ಯವಾಗಿದೆ. ರಾಗಿ ಖರೀದಿ ವಿಚಾರ ಸರ್ಕಾರದ ಹಂತದಲ್ಲಿ ನಿರ್ಧಾರವಾಗಬೇಕಿದೆ. ನಮ್ಮ ಹಂತದಲ್ಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕಿ ಗಿರಿಜಾ ಮಾತನಾಡಿ, ರಾಗಿ ಖರೀದಿ ಮಿತಿ ಸಡಿಲಿಕೆ, ನೋಂದಣಿ ಸ್ಥಗಿತ ಇಡೀ ರಾಜ್ಯದಲ್ಲಿ ಏಕ ರೀತಿಯ ನಿಯಮವಾಗಿದೆ. ಸರ್ಕಾರ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ಸಬ್ಇನ್ಸ್ಪೆಕ್ಟರ್ ಗೋವಿಂದ, ರೈತ ಸಂಘಟನೆಗಳ ಮುಖಂಡರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….