ದೊಡ್ಡಬಳ್ಳಾಪುರ: ಅಕಾಲಿಕವಾಗಿ ಸುರಿದ ಮಳೆಯಿಂದ ತಾಲೂಕಿನ ಸಾಸಲು ಹೋಬಳಿಯ ಸುಮಾರು 240ಕ್ಕು ರೈತರಿಗೆ ಬೆಳೆ ನಷ್ಟ ಪರಿಹಾರ ಬಾರದಿರುವ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆಯೇ ಹೊರತು ರೈತರಿಗೆ ಪರಿಹಾರ ದೊರಕುತ್ತಿಲ್ಲ.
ಕಂದಾಯ ಇಲಾಖೆ ಅಧಿಕಾರಿಗಳು ನೊಂದಣಿ ಮಾಡಬೇಕಾದ ಅರ್ಜಿಯನ್ನು ಕೃಷಿ ಅಧಿಕಾರಿ ಪಡೆದು ನೊಂದಣಿ ಮಾಡಿಲ್ಲ ಎಂದು ಆರೋಪಿಸುತ್ತಿರುವುದು ನನ್ನ ವಿರುದ್ಧದ ವಯಕ್ತಿಕ ದ್ವೇಷವೇ ಕಾರಣ ಎಂದು ಸಾಸಲು ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ವರ್ಗಾವಣೆಗೊಂಡಿರುವ ಸಿದ್ದಲಿಂಗಯ್ಯ ಆರೋಪಿಸಿದ್ದಾರೆ..
ಈ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿದ ಅವರು, ಸಾಸಲು ಹೋಬಳಿಯಲ್ಲಿ ಬೆಳೆ ನಷ್ಟ ಪರಿಹಾರ ನೊಂದಣಿ ಮಾಡಲು ಇತರೆ ಹೋಬಳಿಯಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರ ಕಚೇರಿಯಲ್ಲಿ ಉಂಟಾಗುವ ಒತ್ತಡ ತಗ್ಗಿಸುವ ಸಲುವಾಗಿ ಕೃಷಿ ಇಲಾಖೆಯಲ್ಲಿ ಅರ್ಜಿಗಳನ್ನು ಪಡೆದು ಆಯಾ ವ್ಯಾಪ್ತಿಯ ವಿಎಗಳ ಮೂಲಕ ತಲುಪಿಸುವ ಕಾರ್ಯವನ್ನು ಅಷ್ಟೇ ಮಾಡಲಾಗಿದೆ.
ಇಷ್ಟೆ ನಮ್ಮ ಇಲಾಖೆ ಕಾರ್ಯ. ಆದರೆ ಅರ್ಜಿಗಳನ್ನು ನೊಂದಣಿ ಮಾಡದೆ, ನಾನು ವರ್ಗವಣೆಗೊಂಡ ನಂತರ ನನ್ನ ಮೇಲೆ ಆರೋಪ ಮಾಡಿ ಸಾರ್ವಜನಿಕ ವಲಯದಲ್ಲಿ ನನ್ನನ್ನು ಕಳನಾಯಕನಂತೆ ಬಿಂಬಿಸಲಾಗುತ್ತಿದೆ. ಇದರಲ್ಲಿ ದೊಡ್ಡಬಳ್ಳಾಪುರದ ಕೆಲ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಕೆಲ ರಾಜಕಾರಣಿಗಳ ಶಡ್ಯಂತ್ರ ಅಡಗಿದೆ.
ರೈತರಿಂದ ಶಾಸಕರಿಗೆ ಹಾಗು ಹಿರಿಯ ಅಧಿಕಾರಿಗಳಿಗೆ ದೂರು ಬಂದಾಗ ಸ್ಥಳದಲ್ಲಿದ್ದ ಕೃಷಿ ಅಧಿಕಾರಿಗಳು, ಈ ಪ್ರಕರಣದಲ್ಲಿ ಕೃಷಿ ಇಲಾಖೆ ಪಾತ್ರವೇನು ಎಂಬುದನ್ನು ವಿವರಿಸುವುದನ್ನು ಬಿಟ್ಟು, ನನ್ನ ವಿರುದ್ಧವೇ ಆರೋಪಿಸಿದ್ದಾರೆ. ಇದು ಆ ಅಧಿಕಾರಿಗಳಿಗೆ ತನ್ನ ಇಲಾಖೆ ಸಿಬ್ಬಂದಿಗಳ ಮೇಲಿರುವ ದ್ವೇಷ ಎಷ್ಟೇಂದು ತಿಳಿಯುತ್ತದೆ.
ಅನಾರೋಗ್ಯದ ನಡುವೆಯೂ ಸಮರ್ಪಕ ಸೇವೆ ನೀಡಲಾಗಿದೆ. ಆದರೆ ಕೆಲ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲವೆಂದು ತೀವ್ರವಾದ ಹಿಂಸೆ ನೀಡಿ ಸಾಸಲು ರೈತ ಸಂಪರ್ಕ ಕೇಂದ್ರದಿಂದ ವರ್ಗಾವಣೆ ಆಗುವಂತೆ ಮಾಡಿದರು. ಈಗ ವರ್ಗವಾಣೆಯಾಗಿದ್ದರು ನೆಮ್ಮದಿಯಿಂದ ಕೆಲಸ ಮಾಡಲು ಬಿಡುತ್ತಿಲ್ಲ.
ನೊಂದಣಿ ಮಾಡಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳನ್ನು ರಕ್ಷಿಸಲು ವರ್ಗಾವಣೆಯಾದ ನನ್ನ ಬಲಿಪಶು ಮಾಡಲು ತೀವ್ರತರವಾದ ಪ್ರಯತ್ನ ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರ ಕೃಷಿ ಇಲಾಖೆಯ ಕೆಲ ಅಧಿಕಾರಿಗಳು ಪದೇ ಪದೇ ಸುಳ್ಳು ಆರೋಪ ಮಾಡಿ ಪ್ರತಿ ದಿನ ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಘಟನೆಯಲ್ಲಿ ಕೃಷಿ ಅಧಿಕಾರಿಯ ಪಾತ್ರವೇನು, ರೈತರು ಅರ್ಜಿಗಳನ್ನು ಯಾರಿಗೆ ನೀಡಿದ್ದಾರೆ, ಕಂದಾಯ ಇಲಾಖೆ ಅಧಿಕಾರಿಗಳು ನೊಂದಣಿ ಮಾಡದೆ ಇರಲು ಕಾರಣವೇನು, ನನ್ನ ವಿರುದ್ಧ ಆರೋಪ ಮಾಡಲು ಸಾಕ್ಷಿ ಏನು ಎಂಬುದನ್ನು ಪರಿಶೀಲನೆ ನಡೆಸಿ, ತಪ್ಪು ಮಾಡಿದವರ ವಿರುದ್ದ ಕ್ರಮಕೈಗೊಂಡು ನನ್ನನ್ನು ಕಳಂಕ ಮುಕ್ತನನ್ನಾಗಿಸಬೇಕೆಂದು ಸಿದ್ದಲಿಂಗಯ್ಯ ಅಳಲು ತೋಡಿಕೊಂಡಿದ್ದಾರೆ.
(ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….