ದೊಡ್ಡಬಳ್ಳಾಪುರ: ತಾಲೂಕಿನ ಪ್ರಮುಖ ಹೆದ್ದಾರಿಗಳಲ್ಲಿ ಸರಕು ಸಾಗಿಸುವ ಲಾರಿಗಳ ಬೇಜವಬ್ದಾರಿಯುತ ಓಡಾಟದಿಂದಾಗಿ ಇತರೆ ವಾಹನ ಸವಾರರನ್ನು ಪ್ರಾಣಾಪಾಯಕ್ಕೆ ದೂಡುವಂತೆ ಮಾಡಿದೆ.
ಸೋಮವಾರ ಸಂಜೆ ಟಿ.ಬಿ.ವೃತ್ತದಲ್ಲಿ ಚಲಿಸುತ್ತಿದ್ದ ಲಾರಿಯಿಂದ ಉರುಳಿದ ಮರದ ಬೃಹತ್ ಬುಡಗಳಿಂದಾಗಿ ಹಿಂಬದಿಯಲ್ಲಿ ಬರುತ್ತಿದ್ದ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಮುಖ ವೃತ್ತದಲ್ಲಿ ಉರುಳಿ ಬಿದ್ದ ಮರದ ತುಂಡುಗಳಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಲಾರಿ ಚಾಲಕರ ಬೇಜವಬ್ದಾರಿಯುತ ಓಡಾಟಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಪ್ರತಿ ನಿತ್ಯ ಸಂಕಷ್ಟ: ತಾಲೂಕಿನ ಹೆದ್ದಾರಿಗಳಲ್ಲಿ ಮರಳು, ಜೆಲ್ಲಿಕಲ್ಲು, ಕಬ್ಬಿಣ ತ್ಯಾಜ್ಯ, ಮರದ ಬುಡಗಳು ಹಾಗೂ ನಿಲಗಿರಿ ಎಲೆಗಳನ್ನು ಸಾಗಿಸುವ ವಾಹನಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸದೆ ಬೇಜವಬ್ದಾರಿಯುತವಾಗಿ ಸಾಗುವುದರಿಂದ ಇತರೆ ವಾಹನ ಸವಾರರನ್ನು ಸಂಕಷ್ಟಕ್ಕೆ ತಳ್ಳಿದ್ದು, ಜೆಲ್ಲಿ ಕಲ್ಲು, ಮರಳು, ಮರದ ಬುಡಗಳು ರಸ್ತೆಯಲ್ಲಿ ಬೀಳುತ್ತಿರುವುದರಿಂದ ವಾಹನ ಸವಾರರು ಪ್ರಾಣವನ್ನು ಕೈಲಿಡು ಸಂಚರಿಸುವ ಅನಿವಾರ್ಯತೆ ಎದುರಾಗಿದ್ದರೆ, ಎಲ್ಲೆಂದರಲ್ಲಿ ಬೀಳುವ ಕಬ್ಬಿಣದ ತ್ಯಾಜ್ಯದಿಂದ ವಾಹನಗಳು ಪಂಚರ್ ಆಗಿ ವಾಹನ ಸವಾರರನ್ನು ಹೈರಾಣಾಗಿಸುತ್ತಿದೆ.
ಈ ನಿಟ್ಟಿನಲ್ಲಿ ಪೊಲೀಸ್ ಹಾಗೂ ಆರ್ ಟಿಒ ಇಲಾಖೆ ಕಾರ್ಯಾಚರಣೆ ನಡೆಸಿ, ಬೇಕಾಬಿಟ್ಟಿಯಾಗಿ ಸರಕು ಸಾಗಿಸುವ ಲಾರಿಗಳ ವಿರುದ್ದ ಕ್ರಮಕೈಗೊಂಡು, ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ದೊಡ್ಡಬಳ್ಳಾಪುರದ ಶಿಕ್ಷಕ ದಾದಾಪೀರ್, ಐಟಿ ಉದ್ಯೋಗಿ ರಾಜಶೇಖರ್ ಒತ್ತಾಯಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….