Site icon Harithalekhani

ಆರ್.ಎಲ್.ಜಾಲಪ್ಪ ನಿಧನದ ಬೆನ್ನಲ್ಲೇ ಅಧಿಕಾರಕ್ಕಾಗಿ ಕುಟುಂಬ ಕಲಹ…!: ಬೆಂಬಲಿಗರೊಂದಿಗೆ ಪ್ರತಿಭಟನೆ ಕುಳಿತ ಜಾಲಪ್ಪರ ಕುಟುಂಬ / ಪೊಲೀಸರಿಂದ ಲಘು ಲಾಠಿ ಪ್ರಹಾರ

ಕೋಲಾರ: ದಿವಂಗತ ಕೇಂದ್ರ ಮಾಜಿ ಸಚಿವ ಅರ್.ಎಲ್.ಜಾಲಪ್ಪ ಅಹಿಂದ ಹೆಸರಲ್ಲಿ ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಗಳು. ಜಾಲಪ್ಪ ನಿಧನಾನಂತರ ಅವರು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಗಳ ಎದುರಲ್ಲಿ ಅವರ ಮಕ್ಕಳು ಮೊಮ್ಮಕ್ಕಳು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಡಿಸೆಂಬರ್ 17 ರಂದು ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಅವರು ನಿಧನಾನಂತರ ಈಗ ಅವರೇ ಕಟ್ಟಿ ಬೆಳೆಸಿದ ದೇವರಾಜ ಅರಸು ಎಜುಕೇಷನಲ್ ಟ್ರಸ್ಟ್‌ನ ಆಡಳಿತದ ವಿಚಾರವಾಗಿ, ಆರ್.ಎಲ್.ಜಾಲಪ್ಪ ಸಂಬಂಧಿ ಜಿ.ಹೆಚ್.ನಾಗರಾಜ್ ಹಾಗೂ ಜಾಲಪ್ಪ ಮಕ್ಕಳು, ಮೊಮ್ಮಕ್ಕಳ ನಡುವೆ ವಿವಾದ ಶುರುವಾಗಿದೆ.

ಈ ವಿಚಾರವಾಗಿ ಆರ್.ಎಲ್.ಜಾಲಪ್ಪ ಮಕ್ಕಳು ಹಾಗೂ ಕುಟುಂಬಸ್ಥರು ತಮಗೆ ಅನ್ಯಾಯವಾಗಿದೆ ಎಂದು ಕೋಲಾರದ ಟಮಕಾ ಮೆಡಿಕಲ್ ಕಾಲೇಜು ಬಳಿ ತಮ್ಮ ನೂರಾರು ಜನ ಬೆಂಬಲಿಗರೊಂದಿಗೆ ಜಿ.ಹೆಚ್.ನಾಗರಾಜ್ ವಿರುದ್ದ ಪ್ರತಿಭಟನೆ ನಡೆಸಿದರು.

ಈ ವೇಳೆ ಕಾಲೇಜು ಆವರಣದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟವಾಗಿ ಪ್ರತಿಭಟನೆ ವಿಕೋಪಕ್ಕೆ ಹೋಗಿದ್ದು. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದರು ಆಗ ದೊಡ್ಡಬಳ್ಳಾಪುರ ಕಾಂಗ್ರೆಸ್ ಮುಖಂಡ ಜಿ.ಲಕ್ಷ್ಮೀಪತಿ ಎಂಬುವರ ತಲೆಗೆ ಲಾಠಿ ಏಟು ಬಿದ್ದು ರಕ್ತ ಸೋರಿಸಿಕೊಂಡು ಪೊಲೀಸ್ ಸಬ್‌ಇನ್ಪೆಕ್ಟರ್ ಅಣ್ಣಯ್ಯರ ಮೇಲೆ ಹರಿಹಾಯ್ದರು. ಆದರೆ ಲಾಠಿ ಬೀಸುವ ವೇಳೆ ಅಣ್ಣಯ್ಯ ಕಾಲಿಗೂ ಪೆಟ್ಟಾಗಿ ನಂತರ ಸ್ಥಳಕ್ಕೆ ಬಂದ ಹೆಚ್ಚಿನ ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದರು.

ನಂತರ ಆರ್.ಎಲ್.ಜಾಲಪ್ಪ ಹಿರಿಯ ಮಗ ನರಸಿಂಹಸ್ವಾಮಿ, ಮೊಮ್ಮಗ ಅರವಿಂದ್, ಹೆಣ್ಣುಮಕ್ಕಳಾದ ಉಮಾದೇವಿ, ಲಕ್ಷ್ಮಿ, ಸರಸ್ವತಿ, ಪಾರ್ವತಿ ದೇವಿ, ಸೇರಿ ಎಲ್ಲರೂ ಮೆಡಿಕಲ್ ಕಾಲೇಜು ಎದುರು ಕುಳಿತು ಪ್ರತಿಭಟನೆ ನಡೆಸಿದ್ದು. ಈ ವೇಳೆ ಮಾತನಾಡಿದ ಅವರು ನಮ್ಮ ತಂದೆ ಕಟ್ಟಿ ಬೆಳೆಸಿದ ಸಂಸ್ಥೆಯಲ್ಲಿ ನಮ್ಮನ್ನು ಹೊರಗಿಡುವ ಪ್ರಯತ್ನ ನಡೆಯುತ್ತಿದೆ, ನಮ್ಮ ತಂದೆಯ ಆಶಯಗಳನ್ನು ಈಡೇರಿಸುತ್ತಿಲ್ಲ ಎಂದರು. 

ಆರ್.ಎಲ್.ಜಾಲಪ್ಪ ನಿಧನ ನಂತರ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಕಾರ್ಯದರ್ಶಿಯಾಗಿದ್ದ ಜಿ.ಹೆಚ್.ನಾಗರಾಜ ಅವರನ್ನು ಎರಡು ದಿನಗಳ ಹಿಂದಷ್ಟೇ ಆಯ್ಕೆ ಮಾಡಲಾಗಿದೆ. ಆದರೆ ನಾಗರಾಜ್ ಆಯ್ಕೆ ಸರಿ ಇಲ್ಲ, ಅಧ್ಯಕ್ಷ ಸ್ಥಾನ ಆರ್.ಎಲ್.ಜಾಲಪ್ಪ ಮಗ ನರಸಿಂಹಸ್ವಾಮಿ ಅವರಿಗೆ ಸಿಗಬೇಕು ಜಾಲಪ್ಪ ಅವರು ಕಟ್ಟಿ ಬೆಳೆಸಿದ ಸಂಸ್ಥೆಯಲ್ಲಿ ಅವರ ಮಕ್ಕಳಿಗೆ ಅಧಿಕಾರ ಇಲ್ಲವಾದರೆ ಜಾಲಪ್ಪ ಅವರ ಆಶಯಗಳು ಈಡೇರುವುದಿಲ್ಲ.

ಟ್ರಸ್ಟ್‌ನಲ್ಲಿ ಒಟ್ಟು 12 ಜನ ಟ್ರಸ್ಟ್ ಸದಸ್ಯರ ಪೈಕಿ ಆರು ಜನಕ್ಕೆ ಮಾತ್ರ ಮತದಾನದ ಅಧಿಕಾರ ನೀಡಲಾಗಿದೆ. ಈ ಆರು ಜನರ ಪೈಕಿ ಜಾಲಪ್ಪ ಅವರ ಮಗ ರಾಜೇಂದ್ರ ಒಬ್ಬರಿಗೆ ಮಾತ್ರ ಅವಕಾಶ ನೀಡಿ ಉಳಿದವರನ್ನು ಕೇವಲ ಸದಸ್ಯರನ್ನಾಗಿ ಮಾಡಿದ್ದಾರೆ. ಇದಕ್ಕೆ ಬದಲಾಗಿ ಜಿ.ಹೆಚ್.ನಾಗಾರಾಜ್ ಅವರ ಮಗ ಅವರ ಸಂಬಂಧಿಕರಿಗೆ ಟ್ರಸ್ಟ್‌ನಲ್ಲಿ ಆಜೀವ ಸದಸ್ಯತ್ವ ಮತದಾನದ ಹಕ್ಕು ನೀಡಿ ಇಡೀ ಟ್ರಸ್ಟ್‌ನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. 

ನಮ್ಮ ತಂದೆಯ ಆಶಯಗಳು ಈಡೇರಬೇಕು ಎಂದರೆ ಸರ್ಕಾರ ಮದ್ಯ ಪ್ರವೇಶ ಮಾಡಿ ಜಾಲಪ್ಪ ಅವರ ಕುಟುಂಬಸ್ಥರಿಗೆ ಅಧಿಕಾರ ನೀಡಬೇಕು ಇಲ್ಲವಾದಲ್ಲಿ ಸರ್ಕಾರ ಈ ಶಿಕ್ಷಣ ಸಂಸ್ಥೆಯನ್ನು ವಶಕ್ಕೆ ಪಡೆಯಬೇಕು ಎಂದರು.

ಒಟ್ಟಾರೆ ಜಾಲಪ್ಪ ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆ ಎದುರು ಮಕ್ಕಳೇ ಪ್ರತಿಭಟನೆ ಮಾಡಿ ಕಣ್ಣೀರಾಕುವ ಸ್ಥಿತಿ ಬಂದಿದ್ದು ಮಾತ್ರ ದುರಂತ. ಜಾಲಪ್ಪ ಇದ್ದಾಗಲೇ ವಿವಾದ ಇತ್ಯರ್ಥ ಪಡಿಸಿಕೊಳ್ಳದೆ ಈಗ ಅವರ ನಿಧನಾನಂತರ ಇಡೀ ಶಿಕ್ಷಣ ಸಂಸ್ಥೆಗಳಲ್ಲಿ ಗೊಂದಲ ಸೃಷ್ಟಿ ಮಾಡಿರೋದು ಶಿಕ್ಷಣ ಸಂಸ್ಥೆಗಳಲ್ಲಿ ಆತಂಕಕ್ಕೆ ಕಾರಣವಾಗಿರೋದಂತು ಸುಳ್ಳಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version