ದೊಡ್ಡಬಳ್ಳಾಪುರ: ಶೈಕ್ಷಣಿಕ ಪ್ರಗತಿಗೆ ಸರ್ಕಾರದ ಜೊತೆ ಸಮುದಾಯ ಹಾಗೂ ಕೈಗಾರಿಕೋದ್ಯಮಿಗಳು ಕೈ ಜೋಡಿಸಬೇಕಿದ್ದು, ಕಂಪನಿಗಳ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ನಗರದ ಹೊರವಲಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿಎಸ್‍ಆರ್ ನಿಧಿಯಡಿಯಲ್ಲಿ ಹಲವಾರು ಶಾಲೆಗಳಿಗೆ ಕಟ್ಟಡಗಳು ಹಾಗೂ ಮೂಲ ಸೌಕರ್ಯಗಳು ದೊರೆಯುತ್ತಿರುವುದು ಸಂತಸದ ಸಂಗತಿ. ಅಂತೆಯೇ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಣ್ಣು ಮಕ್ಕಳಿಗೆ ಸಹಾಯಧನ ವಿತರಿಸುತ್ತಿರುವುದು ಅಭಿನಂದನೀಯವಾಗಿದ್ದು, ಕಾಲೇಜಿಗೆ ಅಗತ್ಯವಿರುವ ಡೆಸ್ಕ್‍ಗಳನ್ನು ನೀಡುವಂತೆ ಮನವಿ ಮಾಡಿದರು.
ಮಲಬಾರ್ ಗೋಲ್ಡ್ ಚಾರಿಟಬಲ್ ಟ್ರಸ್ಟ್‍ನ ಮಾರ್ಕೆಟಿಂಗ್ ವ್ಯವಸ್ಥಾಪಕ ಸಾಕ್ ಖಾನ್ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ರಾಜ್ಯದಾದ್ಯಂತ 10ಸಾವಿರ ಬಡ ಮಕ್ಕಳಿಗೆ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಹೆಣ್ಣು ಮಕ್ಕಳನ್ನು ಗುರುತಿಸಿ ನೀಡಲಾಗುತ್ತಿದ್ದು, ಇದು ಮಹಿಳಾ ಸಬಲೀಕರಣಕ್ಕೆ ನಾಂದಿ ಆಗಲಿದೆ. ಸಿಎಸ್‍ಆರ್ ನಿಧಿಯಡಿಯಲ್ಲಿ ನಿಯಮಾನುಸಾರ ಶೇ.2ರಷ್ಟು ಸಾಮಾಜಿಕ ಸೇವೆಗಳಿಗೆ ಉಪಯೋಗಿಸಬೇಕೆಂಬ ನಿಯಮವಿದೆ. ಆದರೆ ನಮ್ಮ ಕಂಪನಿ ಶೆ.5ರಷ್ಟು ವಿನಿಯೋಗಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ 25 ವಿದ್ಯಾರ್ಥಿನಿಯರಿಗೆ ತಲಾ 5 ಸಾವಿರ ರೂಗಳ ವಿದ್ಯಾರ್ಥಿವೇತನ ವಿತರಿಸಲಾಯಿತು.
ತಹಶೀಲ್ದಾರ್ ಮೋಹನ ಕುಮಾರಿ, ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಎಸ್.ಜಂಬಗಿ, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಎ.ಆರ್.ಶಿವಕುಮಾರ್, ಗ್ರಾ.ಪಂ ಸದಸ್ಯರಾದ ಮುನಿರಾಜು, ಗೋವಿಂದರಾಜು, ನಾಗರತ್ನಮ್ಮ , ಮಲಬಾರ್ ಕಂಪನಿಯ ಕಾರ್ಯನಿರ್ವಾಹಕರಾದ ರಾಘವೇಂದ್ರ ಶೆಟ್ಟಿ, ಅಕ್ಷಯ್ ಉನ್ನಿ ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….