ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರಿನ ಕೆರೆಯಲ್ಲಿ ನಗರದ ಒಳಚರಂಡಿ ತ್ಯಾಜ್ಯ ನೀರು ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರು ಸೇರಿ ಕೆರೆ ನೀರು ಕಲುಷಿತವಾಗಿದ್ದು, ರಾಸಾಯನಿಕಯುಕ್ತ ನೀರು ಬೆರೆತಿರುವುದು ಪ್ರಯೋಗಾಲಯದಲ್ಲಿ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ನಮ್ಮ ಊರಿನ ಕೆರೆ ಕಲುಷಿತಗೊಳ್ಳಲು ಕಾರಣ ಹಾಗೂ ಇದಕ್ಕೆ ಪರಿಹಾರದ ಹೊರತು ಹೋರಾಟ ನಿಲ್ಲದು ಎಂದು ಗ್ರಾಮದ ಹಿರಿಯ ಮುಖಂಡರಾದ ಡಾ.ಆಂಜಿನಪ್ಪ ಸ್ಪಷ್ಟಪಡಿಸಿದ್ದಾರೆ.
ಕೆರೆ ನೀರು ಕಲುಷಿತವಾಗಲು ಒಳಚರಂಡಿ ನೀರು ಕಾರಣ ಎಂದು ಗ್ರಾಮಸ್ಥರು ಹೋರಾಟಕ್ಕೆ ಸಿದ್ದರಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು ಹಾಗೂ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆರೆ ಕಲುಷಿತಗೊಳ್ಳಲು ನಗರಸಭೆ ಸಂಸ್ಕರಣೆ ಮಾಡಿದ ನೀರು ಕಾರಣವಲ್ಲ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಡಾ.ಆಂಜಿನಪ್ಪನವರು ಗ್ರಾಮಸ್ಥರ ಹೋರಾಟದ ಕುರಿತು ಸ್ಪಷ್ಟನೆ ನೀಡಿದ್ದು, ಕೆರೆ ಕಲುಷಿತಗೊಂಡಿರುವುದು ಸತ್ಯವಾಗಿರುವುದು ವರದಿಯಲ್ಲಿ ಬಹಿರಂಗವಾಗಿದೆ. ಆದರೆ ನಾವು ಕಾರಣರಲ್ಲ ಎಂದು ನಗರಸಭೆಯವರಾಗಲಿ, ಕೈಗಾರಿಕಾ ಪ್ರದೇಶದವರಾಗಲಿ ಹೊಣೆಯಿಂದ ನುಣಿಚಿಕೊಳ್ಳುವುದು ಸಲ್ಲದು. ನಮ್ಮ ಹೋರಾಟ ಯಾರ ವಿರುದ್ಧವಲ್ಲ ನಮ್ಮೂರಿಗೆ ಕಲುಷಿತ ನೀರಿನಿಂದ ಉಂಟಾಗುವ ಸಮಸ್ಯೆ ತಪ್ಪಿಸುವುದು ನಮ್ಮ ಹೋರಾಟದ ಮೂಲ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ಮುಂದಿನ ಹೋರಾಟದ ರೂಪುರೇಷೆ ಸಿದ್ದತೆ ಮಾಡಲಾಗುವುದು. ಕೆರೆ ನೀರು ಕಲುಷಿತವಾಗಿರುವುದರಿಂದ ಅಂತರ್ಜಲ ಮಲಿನಗೊಂಡು, ಗೋವುಗಳು ಮಾತ್ರವಲ್ಲದೆ ಮನುಷ್ಯರು ಸಹ ಚರ್ಮ ಕಾಯಿಲೆ, ಕರುಳಿನ ಕಾಯಿಲೆ, ಕ್ಯಾನ್ಸರ್ ಮುಂತಾದ ಕಾಯಿಲೆಯಿಂದ ಬಳಲುವ ಆತಂಕವಿದೆ.
ನಮ್ಮ ಊರಿನ ಕೆರೆ ನೀರು ಶುದ್ದೀಕರಣವಾಗಲು, ಸಂಬಂಧಪಟ್ಟ ಅಧಿಕಾರಿ, ಸಚಿವರು, ಶಾಸಕರ ಗಮನಕ್ಕೆ ತಂದು ಶ್ವಾಶ್ವತ ಪರಿಹಾರಬೇಕಿದೆ. ಅಲ್ಲಿಯವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಈ ನಿಟ್ಟಿನಲ್ಲಿ ದೊಡ್ಡತುಮಕೂರು ಕೆರೆ ಹೋರಾಟ ಸಮಿತಿಗೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….