ದೊಡ್ಡಬಳ್ಳಾಪುರ: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಬಂದೇ ಬಿಡ್ತು. ಈ ಹಬ್ಬ ಸುಗ್ಗಿ ಜೊತೆ ಹಿಗ್ಗು ತಂದಿದ್ದು, ನಾಡಿನೆಲ್ಲೆಡೆ ಸಂಭ್ರಮ, ಸಡಗರವನ್ನುಂಟು ಮಾಡಿದೆ. ಅದರಂತೆ ನಗರದ ಬಹುತೇಕ ಶಾಲೆಗಳಲ್ಲಿ ಸಂಕ್ರಾಂತಿ ಕಲರವ ಮುಗಿಲು ಮುಟ್ಟಿದೆ.
ನಗರದ ಶ್ರೀ ದೇವರಾಜ್ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ರೈತರ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಕ್ಕಳೆಲ್ಲ ಸಾಂಪ್ರದಾಯಿಕ ವೇಷಭೂಷಣ ಧರಿಸಿ, ಪಕ್ಕಾ ಹಳ್ಳಿ ಸೊಗಡನ್ನು ಪ್ರದರ್ಶಿಸಿದರು.
ಶಾಲೆಯ ವಿದ್ಯಾರ್ಥಿಗಳು ವಿಭಿನ್ನ ಉಡುಗೆಗಳನ್ನುಟ್ಟು ಗ್ರಾಮೀಣ ಸೊಗಡಿನ ಸಂಕ್ರಾಂತಿ ಹಬ್ಬದ ಸಂಸ್ಕೃತಿ ಬಿಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ದೇಶಿಯ ಉಡುಗೆ, ತೊಡುಗೆ ತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅತಿಥಿಗಳ ಗಮನಸೆಳೆದರಲ್ಲದೇ ಅಪ್ಪಟ ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದರು. ವಿದ್ಯಾರ್ಥಿಗಳು ಮತ್ತು ಶಿಕ್ಷ ಕ ವೃಂದ ಪರಸ್ಪರ ಎಳ್ಳು, ಬೆಲ್ಲ ವಿನಿಮಯದೊಟ್ಟಿಗೆ ಸುಗ್ಗಿಹಬ್ಬ ಸಂಕ್ರಾಂತಿಯನ್ನು ಬರಮಾಡಿಕೊಂಡರು.
ಇದೇ ವೇಳೆ ಮಾತನಾಡಿದ ಶಾಲೆಯ ನಿರ್ದೇಶಕ ಜೆ.ರಾಜೇಂದ್ರ ವಿದ್ಯಾರ್ಥಿಗಳು ಗ್ರಾಮೀಣ ಸೊಗಡನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದ್ದು ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ ಇಂತಹ ಹಬ್ಬ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಸಂಸ್ಕೃತಿಯ ಉಳಿವಿಗೆ ಮನವಿ ಮಾಡಿದರು.
ಪ್ರಾಂಶುಪಾಲರಾದ ಧನಂಜಯ್ ಕಾರ್ಯಕ್ರಮದ ವೇಳೆ ಮಾತನಾಡಿದರು.
ಇದೇ ವೇಳೆ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿ ಆಯ್ಕೆಯಾದ ಜೆ.ರಾಜೇಂದ್ರ ಅವರನ್ನು ಅಭಿನಂದಿಸಲಾಯಿತು.
ಶಾಲೆಯ ವ್ಯವಸ್ಥಾಪಕ ಎಸ್.ರವಿಕುಮಾರ್ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….