ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕಂಬಾಲಹಳ್ಳಿ ಹಾಗೂ ಬುಳ್ಳ ಸಂದ್ರ ಗ್ರಾಮದಲ್ಲಿ ಬುಧವಾರ ರಾತ್ರಿ ಭಾರಿ ಸದ್ದು ಕೇಳಿಸಿದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಅವರು ಗುರುವಾರ ಸಂಜೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಈ ಭಾಗದಲ್ಲಿ ಸದ್ದು ಮಾತ್ರ ಸಂಭವಿಸಿದ್ದು, ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ದಾಖಲು ಆಗಿಲ್ಲ. ಮಳೆ ಹೆಚ್ಚಳದಿಂದ ಈ ರೀತಿ ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ಏರ್ ಬ್ಲಾಸ್ಟ್ ಆಗಿ ಭಾರಿ ಸದ್ದಿನ ಅನುಭವ ಆಗಿದೆ. ಆದರೆ ಭೂ ಕಂಪನ ಅಲ್ಲ. ಕಳೆದ ನವೆಂಬರ್ ಮಾಹೆಯಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ನೀರು ಅಂತರ್ಜಲ ಸೇರುತ್ತಿದೆ. ಅಂತರ್ಜಲ ಸೇರುವ ಸಂದರ್ಭದಲ್ಲಿ ಉಂಟಾಗುವ ಏರ್ ಬ್ಲಾಸ್ಟ್ ನಿಂದಾಗಿ ಲಘು ಭೂ ಕಂಪನಗಳು ಆಗಿರುವುದಾಗಿ ಈ ಹಿಂದೆ ಜಿಲ್ಲೆಗೆ ಆಗಮಿಸಿದ್ದ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ಮತ್ತೊಮ್ಮೆ ರಾಜ್ಯ ಮಟ್ಟದ ತಜ್ಞರು ಕಂಬಾಲಹಳ್ಳಿ ಹಾಗೂ ಬುಳ್ಳಸಂದ್ರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಬಳಿಕ ನಿಜವಾದ ಕಾರಣ ತಿಳಿಯಬಹುದಾಗಿದೆ.
ಜನರು ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು ನಿರಂತರವಾಗಿ ಈ ಭಾಗದ ಮೇಲೆ ಕಣ್ಗಾವಲು ಇಟ್ಟಿದೆ. ನಾವಿರುವ ಪ್ರದೇಶವು ಅತ್ಯಂತ ಸುರಕ್ಷಿತ ವಲಯವಾಗಿದ್ದು ಭೂಕಂಪ ಸಂಭವಿಸುವುದು ಅತಿ ವಿರಳ ಎಂದು ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಧೈರ್ಯ ತುಂಬಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….