![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ವೆಂಕಟರಮಣಸ್ವಾಮಿ, ರಂಗನಾಥಸ್ವಾಮಿ, ವೇಣುಗೋಪಾಲಸ್ವಾಮಿ ಮೊದಲಾದ ಪ್ರಮುಖ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ಭಕ್ತಾದಿಗಳು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಈ ಬಾರಿ ಕರೊನಾ ಹಿನ್ನಲೆಯಲ್ಲಿ ದೇವಾಲಯಗಳಲ್ಲಿ ಸರಳವಾಗಿ ಆಚರಿಸಲಾಯಿತು.
ವೈಕುಂಠ ಏಕಾದಶಿಯಂದು ದೇವರ ದರ್ಶನ ಮಾಡಿದರೆ ಸಾಕ್ಷಾತ್ ವೈಕುಂಠ ದರ್ಶನವೇ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿಂದ ಭಕ್ತಾದಿಗಳು ಉತ್ತರಾಭಿಮುಖದ ವೈಕುಂಠ ದ್ವಾರದ ಮೂಲಕ ಹಾದು ದರ್ಶನ ಪಡೆದರು.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ತೇರಿನಬೀದಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಸಾರ್ವಜನಿಕರಿಗೆ ದೇವಾಲಯದ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೂ ಸಹ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿದ್ದರಿಂದ, ದೇವಾಲಯದ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭಕ್ತಾದಿಗಳೆಂದ ಮೇಲೆ ಎಲ್ಲರಿಗೂ ದರ್ಶನಕ್ಕೆ ಅವಕಾಶ ನೀಡಬೇಕು ಇಲ್ಲವೇ ಬಾಗಿಲು ಮುಚ್ಚಬೇಕು. ನಿರ್ಬಂಧ ಎಂದು ಹೇಳಿ ನೂರಾರು ಜನರನ್ನು ಒಳಗೆ ಬಿಡುವುದು ಸರಿಯಲ್ಲ ಎಂದು ಹಲವಾರು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕೆರೆಬಾಗಿಲು ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ, ನಗರದ ಕುಚ್ಚಪ್ಪನಪೇಟೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ, ಮುಖ್ಯರಸ್ತೆಯ ಶ್ರೀ ವೈಕುಂಠ ಜನಾರ್ಧನ ಸ್ವಾಮಿ ನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ತಾಲೂಕಿನ ವಡ್ಡರಹಳ್ಳಿಯ ಶ್ರೀ ತಿರುಮಲ ದೇವರ ದೇವಾಲಯದಲ್ಲಿ ಇಡೀ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ತೂಬಗೆರೆಯ ಪುರಾತನ ಪ್ರಸಿದ್ದ ಶ್ರೀ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….