ದೊಡ್ಡಬಳ್ಳಾಪುರ: ಗಣರಾಜ್ಯೋತ್ಸವ ಆಚರಣೆ ಕುರಿತು ಪೂರ್ವಭಾವಿ ಸಭೆ ಶಾಸಕ ಟಿ.ವೆಂಕಟರಮಣಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಕೋವಿಡ್ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಶಾಲಾ, ಕಾಲೇಜು ಮಕ್ಕಳನ್ನು ಬಳಸಿಕೊಳ್ಳದೆ ಧ್ವಜಾ ರೋಹಣ ನಡೆಸುವ ಮೂಲಕ ಸರಳವಾಗಿ ನಡೆಸಲಾಗುವುದು. ಎರಡು ವರ್ಷಗಳಿಂದಲು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಸೀಮಿತ ಜನರೊಂದಿಗೆ ಸರಳವಾಗಿ ನಡೆಸಲಾಗುತ್ತಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಕರವೇ ಕನ್ನಡಗಿರ ಬಣದ ರಾಜ್ಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ತಾಲ್ಲೂಕಿನ ಚಿಗರೇನಹಳ್ಳಿ ಗ್ರಾಮದಲ್ಲಿ ಬಿಬಿಎಂಪಿ ವ್ಯಾಪ್ತಿಯಿಂದ ತಂದು ಹಾಕುತ್ತಿರುವ ಕಸದ ವಿರುದ್ಧ ಧರಣಿ ನಡೆಸಲಾಯಿತು, ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇನದಲ್ಲಿ ತಾಲ್ಲೂಕಿನ ಶಾಸಕರು ಸಹ ಮಾತನಾಡಿ ಕಸದಿಂದ ಉಂಟಾಗಿರುವ ಸಮಸ್ಯೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುವ ಭರವೆ ನೀಡಿದ್ದರು ಇದುವರೆಗೂ ಸಭೆಯನ್ನು ಮಾತ್ರ ನಡೆಸಿಲ್ಲ. ಹೀಗಾಗಿ ಜ.26 ರಂದು ನಗರದ ಭಗತ್ ಸಿಂಗ್ ಕ್ರೀಡಾಣಗದಲ್ಲಿ ನಡೆಯುವ ಗಣರಾಜ್ಯೋವದಲ್ಲಿ ಧ್ವಜಾ ರೋಹಣ ನಡೆದ ನಂತರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಲಾಗುವುದು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಕನ್ನಡ ಪಕ್ಷದ ಪರಮೇಶ್, ಕನ್ನಡ ಪರ ಹೋರಾಟ ಒಕ್ಕೂಟದ ನಂಜಪ್ಪ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿರುವ ಪೌರಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಗಣರಾಜ್ಯೋತ್ಸವದಲ್ಲಿ ಅಭಿನಂದಿಸಬೇಕು. ಹಾಗೆಯೇ 3ನೇ ಅಲೆಯಲ್ಲಿ ಶಾಲಾ ಮಕ್ಕಳಲ್ಲಿಯೇ ಸೋಂಕು ಕಂಡು ಬರುತ್ತಿರುವುದರಿಂದ ಶಾಲೆಗಳ ಸುತ್ತಮುತ್ತ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ಸಭೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ, ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮೋಹನ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶುಭಮಂಗಳ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಂಘಟನೆಗಳ ಮುಖಂಡರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….