ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕೋವಿಡ್ ಸೋಂಕು ಶಾಲಾ ಮಕ್ಕಳು ಹಾಗೂ ಶಿಕ್ಷಕರ ಮೇಲೆ ತನ್ನ ವಕ್ರದೃಷ್ಟಿ ಬೀರಿದ್ದು, 38 ಮಕ್ಕಳು, ಹಾಗೂ 5 ಶಿಕ್ಷಕರಿಗೆ ಸೋಂಕು ಧೃಡಪಟ್ಟಿದೆ.
ಈ ಕುರಿತು ಹರಿತಲೇಖನಿಗೆ ತಹಶೀಲ್ದಾರ್ ಮೋಹನಕುಮಾರಿ ಅವರು ಮಾಹಿತಿ ನೀಡಿದ್ದು, ನಗರದ ಕೊಂಗಾಡಿಯಪ್ಪ ಶಾಲೆ, ದೇವಲ ಮಹರ್ಷಿ ಶಾಲೆ, ಆದಿತ್ಯ ಶಾಲೆ, ಕೊನಘಟ್ಟ ಪ್ರೌಢಶಾಲೆ ಸೇರಿದಂತೆ ಒಟ್ಟು 38 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಅರಳು ಮಲ್ಲಿಗೆ ಬಾಗಿಲು, ಕೊನಘಟ್ಟ ಪ್ರಾಥಮಿಕ ಶಾಲೆ, ನಾಗದೇನಹಳ್ಳಿ ಹಾಗೂ ಸೊಣ್ಣೇನಹಳ್ಳಿ ಶಾಲೆಯ ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ಅದೃಷ್ಟವಶಾತ್ ಮಕ್ಕಳು ಹಾಗೂ ಶಿಕ್ಷಕರು ಸೋಂಕಿನ ಯಾವುದೇ ಲಕ್ಷಣಗಳಿಲ್ಲದೆ ಆರೋಗ್ಯವಾಗಿದ್ದಾರೆ.
12ಮಕ್ಕಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರು ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರದ ಆದೇಶದ ಅನ್ವಯ ಮಕ್ಕಳ ಸಂಪರ್ಕಿತರಿಗೆ ತಪಾಸಣೆ ನಡೆಸಲಾಗಿದೆ. ಅಲ್ಲದೆ ಸೋಂಕು ದೃಢಪಟ್ಟ ಶಾಲೆಗಳಿಗೆ ಸ್ಯಾಟೈಸ್ ಮಾಡಿಸಿ, ಎರಡು ದಿನ ರಜೆ ನೀಡಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಐದು ಕಂಟೈನ್ಮೆಂಟ್ ವಲಯ ಘೋಷಣೆ: ಕೋವಿಡ್-19 ಪ್ರಕರಣಗಳು ಹೆಚ್ಚು ಪತ್ತೆಯಾಗಿರುವ ಪ್ರದೇಶಗಳಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ 2, ದೇವನಹಳ್ಳಿ ತಾಲ್ಲೂಕಿನಲ್ಲಿ 1, ನೆಲಮಂಗಲ ತಾಲ್ಲೂಕಿನಲ್ಲಿ 1 ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 1 ಪ್ರದೇಶವನ್ನು ಕಂಟೈನ್ಮೆಂಟ್ ವಲಯವೆಂದು ಪರಿಗಣಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಘೋಷಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕು ಸೂಲಿಬೆಲೆ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ, ನೆಲಮಂಗಲ ತಾಲ್ಲೂಕು ಕಸಬಾ ಹೋಬಳಿಯ ಗುಟ್ಟೆಪಾಳ್ಯ, ಹೊಸಕೋಟೆ ತಾಲ್ಲೂಕು ಕಸಬಾ ಹೋಬಳಿಯ ಕೋಲಾರ ರಸ್ತೆಯಲ್ಲಿರುವ ಎಂ.ವಿ.ಜೆ. ನರ್ಸಿಂಗ್ ಕಾಲೇಜ್ ಮತ್ತು ಜಡಿಗೇನಹಳ್ಳಿ ಹೋಬಳಿಯ ತಗಳ್ಳಿ ಹೊಸಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ದೊಡ್ಡಬೆಳವಂಗಲ ಹೋಬಳಿಯ ಮಧುರನ ಹೊಸಹಳ್ಳಿ ಗೇಟ್ ಬಳಿ ಇರುವ ನರನಹಳ್ಳಿಯ ಎಸ್.ಎನ್.ಸಿ ಕನ್‌ಸ್ಟ್ರಕ್ಷನ್ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಪರಿಗಣಿಸಿ, ಪ್ರದೇಶದ ಸುತ್ತ 200 ಮೀಟರ್ ವ್ಯಾಪ್ತಿಯನ್ನು ಬಫರ್ ವಲಯ ಎಂದು ಘೋಷಿಸಲಾಗಿದೆ.
ಕಂಟೈನ್ಮೆಂಟ್ ವಲಯಗಳ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲು ಸಂಬಂಧಿಸಿದ ತಾಲ್ಲೂಕು ತಹಶೀಲ್ದಾರ್‌ಗಳನ್ನು ಇನ್ಸಿಡೆಂಟ್ ಕಮಾಂಡರ್‌ಗಳನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….