ಬೆಂಗಳೂರು: ಸ್ವಾಮಿ ವಿವೇಕಾನಂದ. ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರು. ನಮ್ಮ ತತ್ತ್ವಶಾಸ್ತ್ರದ ವೈಭವವನ್ನು ಜಗದಗಲಕ್ಕೂ ಸಾರಿದ ಕೀರ್ತಿ ಹೊಂದಿರುವ ಮಹಾನ್ ನಾಯಕ ಇವರು. ಸ್ವಾಮಿ ವಿವೇಕಾನಂದರ ಹೆಸರಿನಲ್ಲೇ ಅದೇನೋ ಪುಳಕವಿದೆ, ಶಕ್ತಿ ಇದೆ, ಸೆಳೆತವಿದೆ. ಇವರ ಒಂದೊಂದು ಮಾತೂ ಬದುಕಿನ ಪ್ರತಿಕ್ಷಣಕ್ಕೂ ಸ್ಫೂರ್ತಿ.
ಸ್ವಾಮಿ ವಿವೇಕಾನಂದ: ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ವಿವೇಕಾನಂದರ ನಿಜವಾದ ಹೆಸರು ನರೇಂದ್ರನಾಥ ದತ್. ಅವರು ವೇದಾಂತದ ಪ್ರಸಿದ್ಧ ಮತ್ತು ಪ್ರಭಾವಶಾಲಿ ಆಧ್ಯಾತ್ಮಿಕ ಗುರುಗಳಾಗಿದ್ದರು. ಚಿಕ್ಕಂದಿನಿಂದಲೇ ಆಧ್ಯಾತ್ಮದತ್ತ ಒಲವು ಅವರಿಗೆ ಮೂಡಿತು. ಅಧ್ಯಯನದಲ್ಲಿ ಅಪಾರ ಆಸಕ್ತಿ ಜ್ಞಾನ ಹೊಂದಿದ್ದರು. 25ನೇ ವಯಸ್ಸಿಗೆ ಬಂದಾಗ ನರೇಂದ್ರನಾಥರು ತಮ್ಮ ಗುರುಗಳಿಂದ ಪ್ರಭಾವಿತರಾಗಿ ಲೌಕಿಕ ಬಾಂಧವ್ಯವನ್ನು ತೊರೆದು ಸನ್ಯಾಸಿಯಾದರು. ಸನ್ಯಾಸಿಯಾದ ನಂತರ ಅವರಿಗೆ ವಿವೇಕಾನಂದ ಎಂದು ಹೆಸರಿಸಲಾಯಿತು. 1881 ರಲ್ಲಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಭೇಟಿಯಾದರು.
ಸ್ವಾಮಿ ವಿವೇಕಾನಂದರು ಆಗಾಗ ಜನರಿಗೆ ಪ್ರಶ್ನೆ ಕೇಳುತ್ತಿದ್ದರು, ನೀವು ದೇವರನ್ನು ನೋಡಿದ್ದೀರಾ? ಇದಕ್ಕೆ ಸರಿಯಾದ ಉತ್ತರ ಯಾರಿಂದಲೂ ಸಿಕ್ಕಿಲ್ಲ. ಒಮ್ಮೆ ಅವರು ರಾಮಕೃಷ್ಣ ಪರಮಹಂಸರಿಗೆ ಅದೇ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ರಾಮಕೃಷ್ಣ ಪರಮಹಂಸರು ಉತ್ತರಿಸಿದರು. ಹೌದು, ನಾನು ದೇವರನ್ನು ನಿಮ್ಮಂತೆಯೇ ಸ್ಪಷ್ಟವಾಗಿ ನೋಡುತ್ತೇನೆ. ಆದರೆ ನಾನು ಅವನನ್ನು ನಿಮಗಿಂತ ಹೆಚ್ಚು ಆಳವಾಗಿ ಅನುಭವಿಸಲು ಸಮರ್ಥನಾಗಿದ್ದೇನೆ ಎಂದಿದ್ದರು. ಸ್ವಾಮಿ ವಿವೇಕಾನಂದರು 1897 ರಲ್ಲಿ ಕೋಲ್ಕತ್ತಾದಲ್ಲಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು.
ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಎಷ್ಟು ಅಧ್ಯಯನ ಮಾಡಬಹುದು, ಎಷ್ಟು ಮಾತನಾಡಬಹುದು ಎಂದು ಲೆಕ್ಕ ಹಾಕಿ ಒಂದು ನಿಷ್ಕರ್ಶೆಗೆ ಬಂದರೆ, ಆ ಎಲ್ಲ ಲೆಕ್ಕಾಚಾರಗಳನ್ನು ಮೀರಿ ನಿಲ್ಲುವವರು ಸ್ವಾಮಿ ವಿವೇಕಾನಂದರು. ಅವರ ವಿಚಾರಗಳು ಅಷ್ಟು ಆಳ, ಅಷ್ಟು ವಿಸ್ತಾರವಾದವು. ಬದುಕಿದ್ದು ಕೇವಲ 39 ವರ್ಷಗಳಾದರೂ, ವಿಶ್ವದ ಮೇಲೆ ಅವರ ಪ್ರಭಾವ ಮಾತ್ರ ಅನನ್ಯ. ತಲೆಮಾರಿನಿಂದ ತಲೆಮಾರಿಗೆ ಅವರು ಪ್ರೇರಣೆಯ ಸ್ರೋತವಾಗಿಯೇ ಇದ್ದಾರೆ, ಮುಂದೆಯೂ ಇರುವುದರಲ್ಲಿ ಯಾವ ಸಂಶಯವೂ ಇಲ್ಲ. ಸಾಧಾರಣವಾಗಿ, ಯಾವುದೇ ಮಹಾಪುರುಷರೊಬ್ಬರ ವಿಚಾರಗಳು ದೀರ್ಘಕಾಲ ನಿಲ್ಲುವುದರಿಂದ, ಅಂತಹವರ ವಿಚಾರಗಳ ಬಗ್ಗೆ ನೂರಾರು ವರ್ಷಗಳ ಬಳಿಕವೂ ಚರ್ಚೆಗಳು ನಡೆಯುವುದು ಸಾಮಾನ್ಯ. ಸ್ವಾಮಿ ವಿವೇಕಾನಂದರು ಇಂತಹ ಸಾಲಿಗೆ ಸೇರುವವರು.
1893ರಲ್ಲಿ ಚಿಕಾಗೋದಲ್ಲಿ ನಡೆದ ವರ್ಲ್ಡ್ಸ್ ಪಾರ್ಲಿಮೆಂಟ್ ಆಫ್ ರಿಲಿಜನ್ಸ್‌ನಲ್ಲಿ ಇವರು ಮಾಡಿದ್ದ ಭಾಷಣ ಇಂದಿಗೂ ಪ್ರಸಿದ್ಧ. ಈ ಭಾಷಣವೇ ಜಗತ್ತು ಭಾರತವನ್ನು ನೋಡುವ ವಿಧಾನವನ್ನು ಶಾಶ್ವತವಾಗಿ ಬದಲಾಯಿಸಿತು ಎಂದರೆ ಅದು ಅತಿಶಯೋಕ್ತಿಯಲ್ಲ.
1984ರಲ್ಲಿ ಭಾರತ ಸರ್ಕಾರವು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನ ಅಥವಾ ಯುವ ದಿವಸ್ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಅಂತೆಯೇ 1985ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಯಿತು. ಅಂದಿನಿಂದ ಪ್ರತೀವರ್ಷ ಈ ಯುವ ದಿವಸ್ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಜೀವನ, ಸಂದೇಶಗಳಲ್ಲಿ ವಿಶೇಷವಾಗಿ ಯುವಜನರ ಮೇಲೆ ಪ್ರಭಾವ ಬೀರುವ, ಬಾಳು ಬೆಳಗುವ ಅಂಶಗಳಿರುತ್ತಿದ್ದವು. ಇದೇ ಕಾರಣಕ್ಕೆ ಈ ವೀರ ಸನ್ಯಾಸಿಯ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ. ರಾಷ್ಟ್ರಪ್ರೇಮ, ಭಾರತೀಯ ಸಂಸ್ಕೃತಿಯ ಅಪಾರ ಜ್ಞಾನ ಸಂಪತ್ತನ್ನು ಹೊಂದಿದ್ದ ವಿವೇಕಾನಂದರು ದೇಶದ ಮೂಲೆ ಮೂಲೆಗೆ ಸಂಚರಿಸಿ ಎಲ್ಲರಿಗೂ ಸ್ಫೂರ್ತಿ ತುಂಬಿದ್ದರು. ಇಂತಹ ಶ್ರೇಷ್ಠ ಸನ್ಯಾಸಿಯ ತಮ್ಮ ತತ್ವ, ಆದರ್ಶ, ಚಿಂತನೆಗಳು ಇಂದಿಗೂ ಪ್ರಸ್ತುತ. ನಮ್ಮ ಭಾರತ ದೇಶ ಕಂಡ ಇಂತಹ ಅಪ್ರತಿಮ ಆಧ್ಯಾತ್ಮಿಕ ಚಿಂತಕರ ಕೆಲ ಜೀವನ ಸಂದೇಶಗಳನ್ನು ಇಂದಿನಿಂದ ಹರಿತಲೇಖನಿ ಓದುಗರಿಗಾಗಿ ನೀಡುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….