ಬೆಂಗಳೂರು: ಕರೊನಾ ಮೂರನೇ ಅಲೆಯ ಹರಡುವಿಕೆ ಈ ಹಿಂದಿನ ಎರಡು ಅಲೆಗಳಿಗಿಂತ ತೀವ್ರವಾಗಿದ್ದು, ಅನೇಕ ಮಂದಿ ಗಣ್ಯರು, ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಕರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಇಂದು ಮತ್ತೊಬ್ಬ ಹಿರಿಯ ಪ್ರಮುಖ ಸಚಿವ ಜೆ ಸಿ ಮಾಧುಸ್ವಾಮಿಗೆ ಸಹ ಕರೊನಾ ಪಾಸಿಟಿವ್ ಬಂದಿದ್ದು ಅವರು ಮತ್ತು ಅವರ ಪುತ್ರಿಗೆ ಪಾಸಿಟಿವ್ ಕಂಡುಬಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ.
ಈ ಹಿಂದೆ ರಾಜ್ಯ ಸಚಿವ ಸಂಪುಟದ ಸಚಿವರುಗಳಾದ ಆರ್.ಅಶೋಕ್ ಮತ್ತು ಬಿ.ಸಿ.ನಾಗೇಶ್ ಅವರಿಗೆ ಕರೊನಾ ಪಾಸಿಟಿವ್ ಬಂದು ಗುಣಮುಖರಾಗುತ್ತಿದ್ದಾರೆ.
ಇನ್ನು ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದ ಸಚಿವರು, ಅಧಿಕಾರಿಗಳಿಗೆ ಕರೊನಾ ಆತಂಕ ಶುರುವಾಗಿದೆ. ಅಲ್ಲದೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಿನೇದಿನೇ ಕರೊನಾ ಪಾಸಿಟಿವ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಲೇ ಇದೆ. ಫೆಬ್ರವರಿ ಹೊತ್ತಿಗೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುವ ಸಾಧ್ಯತೆಯಿದ್ದು ಆತಂಕಸೃಷ್ಟಿಸಿದೆ.
ಸಭೆ: ತೀವ್ರಗತಿಯಲ್ಲಿ ಕರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಆರೋಗ್ಯ ಇಲಾಖೆ ಅಧಿಕಾರಿಗಳ ತುರ್ತು ಸಭೆ ಕರೆದಿದ್ದು ಇಂದು ಮಧ್ಯಾಹ್ನ ಸಭೆ ನಡೆಯಲಿದ್ದು, ಈ ಸಭೆ ವರ್ಚುವಲ್ ಆಗಿರುತ್ತದೆ.
ಸದ್ಯ ರಾಜ್ಯದಲ್ಲಿ ಕರೊನಾ ಪ್ರಕರಣ ದಿನಕ್ಕೆ 15 ಸಾವಿರಕ್ಕೂ ಹೆಚ್ಚು ವರದಿಯಾಗುತ್ತಿದ್ದು, ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ ಎನ್ನಲಾಗುತ್ತಿದೆ. ಕರೊನಾ ದೃಢವಾಗಿರುವ ಸಿಎಂ ಬೊಮ್ಮಾಯಿ ಇಂದು 3 ಗಂಟೆಗೆ ವರ್ಚುವಲ್ ಮೂಲಕ ಮಣಿಪಾಲ್ ಆಸ್ಪತ್ರೆಯಿಂದ ಮಹತ್ವದ ಸಭೆ ಕರೆದಿದ್ದಾರೆ. ಇದರಲ್ಲಿ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚೆಯಾಗಲಿದೆ ಎಂದು ವರದಿಯಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….