ದೊಡ್ಡಬಳ್ಳಾಪುರ: ಸಮರ್ಪಕ ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ, ನಡುರಸ್ತೆಯಲ್ಲಿಯೇ ಸಾರಿಗೆ ಬಸ್ ತಡೆದು ವಿದ್ಯಾರ್ಥಿಗಳು ಹಾಗು ಪ್ರಯಾಣಿಕರು ಪ್ರತಿಭಟನೆ ನಡೆಸಿರುವ ಘಟನೆ ನಗರದ ಟಿಬಿ ವೃತ್ತದ ಬಳಿ ನಡೆದಿದೆ.
ತಾಲೂಕಿನ ತೂಬಗೆರೆ ವ್ಯಾಪ್ತಿಗೆ ಸಮರ್ಪಕ ಸಾರಿಗೆಗೆ ಒತ್ತಾಯಿಸಿ ನವೆಂಬರ್ ತಿಂಗಳಲ್ಲಿಯೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಡಿಪೋ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೂ ಸಮರ್ಪಕವಾಗಿ ಬಸ್ ಸಂಚರಿಸದೆ. ಮೂರು ಬಸ್ ಪ್ರಯಾಣಿಕರು ಒಂದೇ ಬಸ್ಸಿನಲ್ಲಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ಇದನ್ನು ಪ್ರಶ್ನಿಸಿದರೆ ಚಾಲಕರು ಹಾಗೂ ನಿರ್ವಾಹಕರು ದೌರ್ಜನ್ಯ ಮಾಡುತ್ತಾರೆ ಎಂಬುದು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.
ಪ್ರತಿಭಟನೆಗೆ ಕರವೆ ಬೆಂಬಲ: ವಿಷಯ ತಿಳಿದು ಸ್ಥಳಕ್ಕೆ ಬಂದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ತಾಲೂಕು ಗೌರವ ಅಧ್ಯಕ್ಷ ಪು.ಮಹೇಶ್ ಹಾಗೂ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಬೆಂಬಲ ಸೂಚಿಸಿದರು.
ಈ ವೇಳೆ ಮಾತನಾಡಿದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಶೈಕ್ಷಣಿಕ ಉದ್ದೇಶಕ್ಕಾಗಿ ಬಸ್ ಪಾಸ್ ನೀಡಿದರು ಸಮರ್ಪಕವಾಗಿ ಬಸ್ ನೀಡದೇ ಇರುವುದು ಸರ್ಕಾರದ ಹಾಗೂ ಇಲಾಖೆಯ ಲೋಪವಾಗಿದೆ. ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರಕ್ಕೆ ಸಾರಿಗೆ ಡಿಪೋ ಸ್ಥಳಾಂತರವಾದಾಗಲೇ ನಮ್ಮ ತಾಲೂಕಿಗೆ ಸಾರಿಗೆ ಸಮಸ್ಯೆ ಆರಂಭವಾಗಿ ಹೋಗಿದೆ.
ತೂಬಗೆರೆ ವ್ಯಾಪ್ತಿಗೆ ಮೂರು ಬಸ್ ತೆರಳಬೇಕು ಆದರೆ ಒಂದು ಬಸ್ ತೆರಳಿದರೆ ಪ್ರಯಾಣಿಸಲು ಹೇಗೆ ಸಾಧ್ಯ…? ಇದು ಅಧಿಕಾರಗಳಿಗೆ ತಿಳಿಯದೆ. ತಾಲೂಕಿನಲ್ಲಿ ವಿವಿಧ ಯಾತ್ರೆಗಳಿಗೆ ಬಸ್ ಕಳಿಸಲು ಹೆಚ್ಚುವರಿ ಬಸ್ ಕಳಿಸಬೇಕೆ ಹೊರತು, ಪ್ರಯಾಣಿಕರಿಗೆ ತೊಂದರೆ ಮಾಡಿ ಒಪ್ಪಂದದ ಮೇಲೆ ಕಳಿಸಬಾರದು.
ಕೋವಿಡ್ ವ್ಯಾಪಕವಾಗುತ್ತಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಅಗತ್ಯ ಆದರೆ ಒಂದು ಬಸ್ ನಲ್ಲಿ ಮೂರು ಬಸ್ ಪ್ರಯಾಣಿಕರು ಪ್ರಯಾಣಿಸಬೇಕೆಂದರೆ ಅದರ ವಾಸ್ತವ ಅಧಿಕಾರಿಗಳು, ಜನ ಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಸಾರಿಗೆ ಅಧಿಕಾರಿಗಳು ಬುಧವಾರದಿಂದ ನಿಗದಿತ ಸಮಯದಲ್ಲಿ ಬರಬೇಕಾದ ಮೂರು ಬಸ್ ಕಳಿಸಲಾಗುವುದು ಎಂದರು. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಲಿಖಿತ ಭರವಸೆ ನೀಡದಿದ್ದರೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು. ನಂತರ ಅಧಿಕಾರಿಗಳ ಲಿಖಿತ ಭರವಸೆಯ ನಂತರ ಪ್ರತಿಭಟನೆ ಕೈಬಿಡಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….