ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗಿನ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ಪಾಲಿಸುವುದರ ಜೊತೆಗೆ, ಜಾತ್ರೆ, ಸಮಾವೇಶ, ಪ್ರತಿಭಟನೆಯಲ್ಲಿ ಜನಸಂದಣಿ ಸೇರುವಂತಿಲ್ಲ ಎಂದು ಹೇಳಿದ್ದಾರೆ.
ಶಾಲೆ ನಡೆಸುವುದು ಅಥವಾ ಬಂದ್ ಮಾಡುವ ಬಗ್ಗೆ ಆಯಾ ಜಿಲ್ಲಾಧಿಕಾರಿ ಅವರಿಗೆ ಅಧಿಕಾರ ನೀಡಿದ್ದೇವೆ. ವೈಕುಂಠ ಏಕಾದಶಿಯೆಂದು ದೇವಸ್ಥಾನದಲ್ಲಿ ಸಂಪ್ರದಾಯದಂತೆ ಮಾತ್ರ ಪೂಜೆ ನಡೆಸಬೇಕು. ಯಾವುದೇ ಬಗೆಯಲ್ಲಿ ಜನ ಸೇರಬಾರದು. ಮಕ್ಕಳ ವಾರ್ಡ್ ಮತ್ತು ಬೆಡ್ ಗಳನ್ನು ಮೀಸಲಿಡಲು ಸೂಚಿಸಲಾಗಿದೆ ಎಂದವರು ಹೇಳಿದರು.
ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ಕೋವಿಡ್ ಪರೀಕ್ಷೆ ಹೆಚ್ಚಿಸಬೇಕೆಂದು ಈಗಾಗಲೇ ಸೂಚಿಸಲಾಗಿದೆ. ನಾಳೆಯಿಂದ ಮಾರುಕಟ್ಟೆಗಳನ್ನು ವೀಕೆಂದ್ರೀಕರಣ ಮಾಡಲಾಗುವುದು. ವೀಕೆಂಡ್ ಕರ್ಫ್ಯೂ ಮುಂದುವರೆಸುವ ಬಗ್ಗೆ ಸದ್ಯ ನಿರ್ಧಾರ ಮಾಡಿಲ್ಲ, ಪ್ರಧಾನಿ ಸಭೆ ಬಳಿಕವೇ ಸೂಕ್ತ ನಿರ್ಣಯವನ್ನು ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ಚರ್ಚಿತ ವಿಷಯ: ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲು ನಿರ್ಧರಿಸಲಾಯಿತು. ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದು 9 ತಿಂಗಳು ಪೂರೈಸಿದ ಮುಂಚೂಣಿಯ ಕಾರ್ಯಕರ್ತರಿಗೆ 3ನೇ ಡೋಸ್ ಅನ್ನು ಆದ್ಯತೆಯ ಮೇರೆಗೆ ನೀಡಲು ಸೂಚಿಸಿದರು.
ಮೂರನೇ ಅಲೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ನಿಯಮಿತವಾಗಿ ಮಾಡುವಂತೆ ಹಾಗೂ ಸೂಕ್ತ ಔಷಧಿಗಳ ಕಿಟ್ ಅನ್ನು ಒದಗಿಸುವಂತೆ ಸೂಚಿಸಿದರು.
ಪರೀಕ್ಷಾ ವರದಿ ಬಂದ ಕೂಡಲೇ ಸೋಂಕಿತರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದೆಯೇ ಇಲ್ಲವೇ ಎಂದು ನಿರ್ಧರಿಸುವ ಟ್ರಯಾಜಿಂಗ್ ವ್ಯವಸ್ಥೆಯನ್ನು ಬಲಪಡಿಸುವಂತೆ ಸೂಚಿಸಿದರು.
ಹೋಮ್ ಐಸೊಲೇಷನ್ ಮತ್ತು ಟ್ರಯಾಜಿಂಗ್ ಪ್ರಕ್ರಿಯೆಯಲ್ಲಿ ಹೌಸ್ ಸರ್ಜನ್ ವೈದ್ಯರು ಹಾಗೂ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….