ಬೆಂಗಳೂರು: ಕರೊನಾ ಸೋಕಿತರ ಸಂಖ್ಯೆ ಹೆಚ್ಚಾಗುವುದರ ನಡುವೆಯೇ ಈಗಾಗಲೇ ಎರಡು ಡೋಸ್ ಪಡೆದ 60 ವರ್ಷ ದಾಟಿದ ಅನಾರೋಗ್ಯ ಪೀಡಿತರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆ ಅಭಿಯಾನ ಇಂದಿನಿಂದ ಆರಂಭವಾಗದೆ.
ಡಿ.25ರಂದು ಪ್ರಧಾನಿ ನರೇಂದ್ರ ಮೋದಿ ಜ.10 ರಿಂದ 60 ವರ್ಷ ದಾಟಿದವರಿಗೆ, ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವುದಾಗಿ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಇಂದಿನಿಂದ ಚಾಲನೆ ನೀಡಲಾಗಿದೆ.
ಜ.8ರ ಶನಿವಾರದಿಂದಲೇ ಕೋವಿನ್ ಪೋರ್ಟಲ್‌ನಲ್ಲಿ 3ನೇ ಡೋಸ್ ಪಡೆಯಲು ಬುಕ್ಕಿಂಗ್ ಆರಂಭವಾಗಿದೆ. ಲಸಿಕಾ ಕೇಂದ್ರಗಳಲ್ಲಿ ನೇರವಾಗಿ ಬುಕ್ ಮಾಡಿಸಿ ಲಸಿಕೆ ಪಡೆಯಲು ಅವಕಾಶವಿದೆ.
ಯಾರಿಗೆ ಲಸಿಕೆ ?: ವೈದ್ಯಕೀಯ ಸಿಬ್ಬಂದಿ, 60 ವರ್ಷ ಮೇಲ್ಪಟ್ಟ ಪೂರ್ವ ರೋಗಪೀಡಿತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ 2ನೇ ಡೋಸ್ ಲಸಿಕೆ ಪಡೆದು 9 ತಿಂಗಳು ಅಥವಾ 39 ವಾರ ಆಗಿರಬೇಕು. ಅಂತಹವರು ಬೂಸ್ಟರ್ ಡೋಸ್‌ನ್ನು ಪಡೆಯಲು ಅರ್ಹರಾಗಿರುತ್ತಾರೆ.
ಮೊದಲಿನ 2 ಡೋಸ್ ಲಸಿಕೆ ಯಾವ ಕಂಪನಿಯದ್ದಾಗಿರುತ್ತೋ, ಅದೇ ಕಂಪನಿಯ ಲಸಿಕೆಯನ್ನು 3ನೇ ಡೋಸ್ ಆಗಿ ಪಡೆಯಬೇಕು. ಅಂದರೆ ಮೊದಲು ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಡಬಲ್ ಡೋಸ್ ಲಸಿಕೆ ಪಡೆದವರು ಪುನಃ ಅದೇ ಲಸಿಕೆಯನ್ನು ಪಡೆಯಬೇಕು.
ಬೂಸ್ಟರ್ ಡೋಸ್ ನೀಡಲು ಕಾರಣ: ಕಾಯಿಲೆ ಪೀಡಿತರಿಗೆ ಮೊದಲ 2 ಡೋಸ್ ಪಡೆದರೂ ಅವರ ರೋಗನಿರೋಧಕ ಶಕ್ತಿ ವೃದ್ಧಿಸದೇ ಇರಬಹುದು. ಇನ್ನು ವೈದ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ನಿತ್ಯ ಸಾವಿರಾರು ಜನ ಹಾಗೂ ರೋಗಿಗಳು ಸಂಪರ್ಕಕ್ಕೆ ಬರುತ್ತಿರುತ್ತಾರೆ. ಹೀಗಾಗಿ ಅವರಿಗೆ ಮುಂಜಾಗ್ರತಾ ಡೋಸ್ ನೀಡಲಾಗುತ್ತದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….