ದೊಡ್ಡಬಳ್ಳಾಪುರ: ಖರೀದಿ ಮಿತಿ ಸಡಿಲಗೊಳಿಸಿ ಒಬ್ಬ ರೈತರಿಂದ ಕನಿಷ್ಠ 50 ಕ್ವಿಂಟಾಲ್ವರೆಗೂ ರಾಗಿ ಖರೀದಿ ಮಾಡುವ ಆದೇಶ ಹೊರಬಿಳುವವರೆಗೂ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ನಗರದ ಎಪಿಎಂಸಿಯಲ್ಲಿನ ರಾಗಿ ಖರೀದಿ ಕೇಂದ್ರದ ಮುಂದೆ ನಡೆಸುತ್ತಿರುವ ಧರಣಿ ಎರಡನೇ ದಿನವು ಮುಂದುವರೆದಿದೆ.
ಇಂದು ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಟಿ.ವೆಂಕಟರಮಣಯ್ಯ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಈ ವೇಳೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ರೈತರು ಹೆಚ್ಚು ಜಮೀನು ಹೊಂದುವುದು, ರಾಗಿ ಬೆಳೆಯುವುದೇ ತಪ್ಪು ಎನ್ನುವ ರೀತಿಯಲ್ಲಿ ನಿಯಮ ಮಾಡಿರುವುದು ಅವೈಜ್ಞಾನಿಕವಾಗಿದೆ. ಯಂತ್ರಗಳ ಬಳಕೆ ನಂತರ ರಾಗಿ ಬೆಳೆಯುವ ಪ್ರದೇಶ ವಿಸ್ತಾರವಾಗಿದೆ. 2020-21ನೇ ಸಾಲಿನಲ್ಲಿ ಇದ್ದ ನಿಯಮವೇ ಈ ಬಾರಿಯು ಜಾರಿಗೊಳಿಸುವ ಮೂಲಕ ರಾಗಿ ಖರೀದಿ ಮಿತಿಯನ್ನು ಸಡಿಲಗೊಳಿಸಬೇಕು. ರೈತರ ಬೇಡಿಕೆ ನ್ಯಾಯೋಚಿತವಾಗಿದೆ. ಈ ಬಗ್ಗೆ ಆಹಾರ ಮತ್ತು ನಾಗರೀಕ ಸಚಿವರು ಹಾಗೂ ಕೃಷಿ ಸಚಿವರೊಂದಿಗೆ ಚರ್ಚಿಸಲು ರೈತರ ನಿಯೋಗವನ್ನು ಒಂದೆರಡು ದಿನಗಳಲ್ಲಿ ಕರೆದೊಯ್ಯಲಾಗುವುದು ಎಂದು ಹೇಳಿದರು.
ಧರಣಿ ಸ್ಥಣಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ರೈತರ ಬೇಡಿಕೆ ಕುರಿತಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಖರೀದಿ ಮಿತಿ ಸಡಿಲಗೊಳುವ ಕುರಿತಂತೆ ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೂ ಸಣ್ಣ ಹಿಡುವಳಿ ರೈತರಿಂದ ರಾಗಿ ಖರೀದಿ ನೋಂದಣಿ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು.
ರಾಜ್ಯ ರೈತ ಸಂಘದ ಮುಖಂಡರು ಮಾತನಾಡಿ, ರೈತರನ್ನು ವಿಭಾಗ ಮಾಡುವ ಮೂಲಕ ಹೋರಾಟವನ್ನು ದಾರಿತಪ್ಪಿಸಲು ಬಿಡುವುದಿಲ್ಲ. ರಾಗಿ ಬೆಳೆಯುವ ರೈತರೆಲ್ಲರೂ ಒಂದೆ. ಖರೀದಿ ಮಿತಿಯನ್ನು ಸಡಿಲಗೊಳಿಸಿ ರೈತರಿಂದ ಹೆಚ್ಚುವರಿಯಾಗಿ ರಾಗಿ ಖರೀದಿಸುವ ಲಿಖಿತ ಭರವಸೆ ದೊರೆಯದ ಹೊರತು ಧರಣಿಯನ್ನು ಹಿಂತೆಗೆದುಕೊಳ್ಳುವುದಿಲ್ಲ, ನೋಂದಣಿಗೂ ಅವಕಾಶ ನೀಡುವುದಿಲ್ಲ. ಹೋರಾಟವನ್ನು ಮುಂದುರೆಸುತ್ತವೇ ಎಂದು ಹೇಳಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….