ದೊಡ್ಡಬಳ್ಳಾಪುರ: ಕಳೆದ ಎರಡು ವರ್ಷಗಳಿಂದ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಟಿ.ಎಸ್.ಶಿವರಾಜ್ ಅವರು ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ನಂಜನಗೂಡು ತಹಶೀಲ್ದಾರ್ ಆಗಿದ್ದ ಮೋಹನ್ ಕುಮಾರಿ ಅವರು ಇಂದು ಅಧಿಕಾರ ವಹಿಸಿಕೊಂಡರು.
ಈ ವೇಳೆ ಕಂದಾಯ ಇಲಾಖೆ ಸಿಬ್ಬಂದಿ ನೂತನ ತಹಶೀಲ್ದಾರ್ ಮೋಹನ್ ಕುಮಾರಿ ಅವರನ್ನು ಅಭಿನಂದಿಸಿದರು.
ತಹಶೀಲ್ದಾರ್ ಶಿವರಾಜ್ ಸೇವೆ ಸ್ಮರಣೀಯ: ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವರಾಜ್ ಅವರು ತಮ್ಮ ಸೌಮ್ಯ ಸ್ವಭಾವದಿಂದ ತಾಲೂಕಿನಲ್ಲಿ ಜನಮನ್ನಣೆ ಪಾತ್ರರಾಗಿ ಅವರ ಎರಡು ವರ್ಷದ ಅಧಿಕಾರಾವಧಿ ತಾಲೂಕಿನ ಜನತೆಗೆ ಸ್ಮರಣೀಯವೆಂದು ಮಧುರೆ ಶ್ರೀ ಶನಿ ಮಹಾತ್ಮ ದೇವಾಲಯದ ಧರ್ಮದರ್ಶಿ ಪ್ರಕಾಶ್ ತಿಳಿಸಿದ್ದಾರೆ.
ಶಿವರಾಜ್ ಅವರ ವರ್ಗಾವಣೆ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿದ ಅವರು, ಅಧಿಕಾರ ಶಾಶ್ವತವಲ್ಲ ಆದರೆ ಅಧಿಕಾರಿಗಳು ತಮ್ಮ ಅವಧಿಯಲ್ಲಿ ಮಾಡಿದ ಜನಪರ ಕಾರ್ಯ ಜನಮಾನಸದಲ್ಲಿ ನೆನಪಾಗಿ ಉಳಿಯುತ್ತದೆ ಎನ್ನುವುದಕ್ಕೆ ತಹಶೀಲ್ದಾರ್ ಅವರ ಕಾರ್ಯವೈಕರಿ ಸಾಕ್ಷಿಯಾಗಿದೆ.
ಕೋವಿಡ್ -19 ಸೋಂಕಿನ ಮೊದಲ ಅಲೆ, ಎರಡನೇ ಅಲೆಯ ಸಂಕಷ್ಟದಲ್ಲಿ ತಾಲೂಕಿಗೆ ಅವರು ಸಲ್ಲಿಸಿರುವ ಸೇವೆ ಅಪಾರವಾಗಿತ್ತು.
ಮೊದಲ ಲಾಕ್ ಡೌನ್ ನಿಂದ ಆರಂಭವಾಗಿ ಹೊರ ಜಿಲ್ಲೆಗಳ ಕಾರ್ಮಿಕರಿಗೆ ವಸತಿ. ಕೋವಿಡ್ ನಿಯಂತ್ರಣಕ್ಕೆ ಕ್ರಮ, ಎರಡನೆ ಅಲೆಯ ವೇಳೆ ಉಂಟಾದ ತೊಂದರೆಗಳ ವೇಳೆ ಆಕ್ಸಿಜನ್ ಪೂರೈಕೆ, ಕಾರ್ಖಾನೆಗಳ ನೆರವಿನೊಂದಿಗೆ ಅಕ್ಸಿಜನ್ ಕಾನ್ಸಿಟ್ರೆಟರ್ ಪೂರೈಕೆ, ಸೋಂಕಿತರ ಚಿಕಿತ್ಸೆಗೆ ವಸತಿ ನಿಲಯಗಳ ವ್ಯವಸ್ಥೆ, ಮೇಕ್ ಶಿಫ್ಟ್ ಸ್ಥಾಪನೆ, ಆಕ್ಸಿಜನ್ ಘಟಕ ನಿರ್ಮಾಣ, ಲಸಿಕೆ ಅಭಾವದ ವೇಳೆ ಲಸಿಕೆ ಪೂರೈಕೆಗೆ ಕ್ರಮ ಸೇರಿದಂತೆ ಕೋವಿಡ್ ವಾರಿಯರ್ ಆಗಿ ಶಿವರಾಜ್ ಅವರು ಬಹಳಷ್ಟು ಶ್ರಮಿಸಿದ್ದರು. ಅಲ್ಲದೆ ಕಂದಾಯ ಇಲಾಖೆಯಲ್ಲಿ ಅಕ್ರಮ ಒತ್ತುವರಿಗೆ ತೆರವುಗೊಳಿಸುವ ಕಾರ್ಯ ಮಾಡಿದ್ದರು ಎಂದು ಪ್ರಕಾಶ್ ಅವರು ಸ್ಮರಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….