Site icon Harithalekhani

ಕರ್ನಾಟಕ ಬಂದ್ ನಿಂದ ಕನ್ನಡಿಗರಿಗೇ ಕಷ್ಟ ಹೊರತು ಮಹಾರಾಷ್ಟ್ರಕ್ಕಲ್ಲ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸಿದ ಎಂಇಎಸ್ ಸಂಘಟನೆಯನ್ನು ಕಾನೂನು ವ್ಯಾಪ್ತಿಯಲ್ಲಿ ಕ್ರಮ ಜರುಗಿಸಿ ನಿಷೇಧ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಗುರುವಾರ ಹೇಳಿದರು.

ಕರ್ನಾಟಕ ಬಂದ್ ಕುರಿತು ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ ಮಾಡುವುದಕ್ಕೆ ಕರೆ ನೀಡಲಾಗಿದೆ. ಬಂದ್ ಮಾಡುವುದರಿಂದ ಏನು ಪ್ರಯೋಜನ..? ಅನುಕೂಲ ಯಾರಿಗೆ..? ಅನಾನುಕೂಲ ಯಾರಿಗೆ? ಅನ್ನೋದು ಮುಖ್ಯ. ಈ ಬಂದ್ ಕರೆಯಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ರಾಜ್ಯದ ಜನರಿಗೆ ತೊಂದರೆ ಆಗುತ್ತದೆ ಎಂದು ಅವರು ತಿಳಿಸಿದರು.

ಎಂಇಎಸ್ ಸೇರಿದಂತೆ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ರಾಜ್ಯ ಸರಕಾರ ಮುಲಾಜಿಲ್ಲದೆ ಮುಂದಾಗಬೇಕು. ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಸರ್ಕಾರ ಮೀನಮೇಷ ಇಲ್ಲದೇ ಮುಂದಾಗಬೇಕು. ಕಠಿಣ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿ. ಬಂದ್ ಘೋಷಣೆಯಿಂದ ನಮ್ಮ ಜನರಿಗೆ ತೊಂದರೆ ಆಗುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವರಿಗೆ ಆಗುವ ಕಷ್ಟದ ಬಗ್ಗೆ ಚಿಂತಿಸಬೇಕು. ಬಂದ್ ಗೆ ಕರೆ ನೀಡಿದವರು ಕೂಡ ಈ ಬಗ್ಗೆ ಯೋಚಿಸಬೇಕು ಎಂದರು.

ಬಂದ್ ನಿಂದ ಕನ್ನಡಿಗರಿಗೆ ಬಹಳ ಅನಾನುಕೂಲವೇ ಆಗುತ್ತದೆ. ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕನ್ನಡ ದ್ರೋಹಿಗಳನ್ನು ಹತ್ತಿಕ್ಕಲು ಏನು ಬೇಕೋ ಆ ಕ್ರಮ ಕೈಗೊಳ್ಳಲು ಒತ್ತಡ ಹೇರಬೇಕು ಎಂದು ಅವರು ಸಲಹೆ ಮಾಡಿದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version