ಬೆಂ.ಗ್ರಾ.ಜಿಲ್ಲೆ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಕಾರ್ಮಿಕ ಮಂಡಳಿಯಲ್ಲಿ ನೋಂದಣಿ ಮಾಡಿ ಕೊಳ್ಳಬೇಕು. ನೋಂದಣಿಯಾದ ಕಾರ್ಮಿಕರ ಮಕ್ಕಳಿಗೆ ನರ್ಸರಿಯಿಂದ ಪಿ.ಎಚ್.ಡಿ ಯವರೆಗೂ ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್.ನಾಗೇಂದ್ರ ತಿಳಿಸಿದರು.
ಹೊಸಕೋಟೆ ತಾಲೂಕು ಗಿಡ್ಡಪನಹಳ್ಳಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ 1098 ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಬಾಲ ಕಾರ್ಮಿಕ ಪದ್ಧತಿ, (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ1986ರ,ಬಾಲ್ಯ ವಿವಾಹ ನಿಷೇಧ ಕಾಯ್ದೆ,ಮಕ್ಕಳ ಮೇಲಿನ ದೌರ್ಜನ್ಯಗಳು ಮತ್ತು ಅಂತರ್ಜಾಲ ಸುರಕ್ಷತೆಯ ಕುರಿತಾಗಿ ಮಕ್ಕಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರಿಗೆ ಮಾಸಿಕ ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ ಸೌಲಭ್ಯ, ವಿವಾಹ ಪ್ರೋತ್ಸಾಹ ಧನ, ದುರ್ಬಲತೆ ಪಿಂಚಣಿ ಸೌಲಭ್ಯ, ಹೆರಿಗೆ ಸೌಲಭ್ಯ, ಶಿಶುಪಾಲನ ಸೌಲಭ್ಯ ವೈದ್ಯಕೀಯ ಸಹಾಯಧನ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಬಿಎಂಟಿ ಬಸ್ ಪಾಸ್ ಸೌಲಭ್ಯ,ಹೀಗೆ ಇನ್ನಿತರ ಸೌಲಭ್ಯಗಳು ಲಭ್ಯವಿ ಎಂದು ಹೇಳಿದರು.
ಪೋಷಕರು ಕಟ್ಟಡ ಕಾರ್ಮಿಕರು ಹಾಗಿದ್ದಲ್ಲಿ, ಈ ಕೂಡಲೇ ತಾಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಗೆ ಭೇಟಿ ನೀಡಿ, ನೊಂದಣಿಯಾಗಿ ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಸುಬ್ಬರಾವ್.ಎಸ್ ಅವರು ಮಾತನಾಡಿ ಮಕ್ಕಳ ರಕ್ಷಣೆ ಹಾಗೂ ಸಂರಕ್ಷಣೆಗಾಗಿ ಹಲವು ಕಾಯ್ದೆಗಳು ಇದ್ದರೂ ಸಹ ಮಕ್ಕಳಿಂದ ದುಡಿಸಿಕೊಳ್ಳುತ್ತಿರುವುದು ದುಃಖದ ವಿಷಯವಾಗಿದೆ ಎಂದು ತಿಳಿಸಿದರು.
14 ವರ್ಷದೊಳಗಿನ ಮಕ್ಕಳು ಹಾಗೂ 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದ್ದಲ್ಲಿ, ಅಂತಹವರಿಗೆ ಕನಿಷ್ಠ 6 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಹಾಗೂ ಗರಿಷ್ಠ 2 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 20 ಸಾವಿರದಿಂದ ರೂ. 50 ಸಾವಿರದವರೆಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.
18 ವರ್ಷದೊಳಗಿನ ಮಕ್ಕಳನ್ನು ಹೋಟೆಲ್, ಗ್ಯಾರೇಜ್, ಅಂಗಡಿಗಳು, ಮಾರುಕಟ್ಟೆ, ಬಾರ್ ಮತ್ತು ರೆಸ್ಟೊರೆಂಟ್, ಮಾಂಸದ ಅಂಗಡಿ, ಇತ್ಯಾದಿ ಸ್ಥಳಗಳಲ್ಲಿ ಕೆಲಸಕ್ಕೆ ನೇಮಿಸಿ ಕೊಂಡಿರುವುದು ಕಂಡು ಬಂದಲ್ಲಿ, ಸಾರ್ವಜನಿಕರು ಕೂಡಲೇ ಮಕ್ಕಳ ಉಚಿತ ಸಹಾಯವಾಣಿ-1098 ಗೆ ಅಥವಾ ಪೆನ್ಸಿಲ್ ಪೂಟಲ್ https://pencil.gov.inನಲ್ಲಿ ದೂರು ದಾಖಲಿಸಬಹುದು ಎಂದು ಹೇಳಿದರು.
ಹೊಸಕೋಟೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿದ್ಯಾ ಅವರು ಮಾತನಾಡಿ ಯಾರಾದರೂ ಬಾಲ್ಯವಿವಾಹ ಮಾಡಿಕೊಂಡರೆ ಅಥವಾ ಮಾಡಿದರೆ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರಡಿಯಲ್ಲಿ ಶಿಕ್ಷಾರ್ಹ ಅಪರಾಧ. ಅಂತಹ ಮದುವೆಯಲ್ಲಿ ಭಾಗವಹಿಸುವರು, ಕಲ್ಯಾಣ ಮಂಟಪ ಮಾಲೀಕರು, ಪುರೋಹಿತರು, ಛಾಯಾಗ್ರಾಹಕರು, ವರನ ಪೋಷಕರು. ಮಗುವಿನ ಪೋಷಕರು ಮತ್ತು ದಲ್ಲಾಳಿಗಳು ತಪ್ಪಿತಸ್ಥರಾಗುತ್ತಾರೆ. ಅವರಿಗೆ ಕನಿಷ್ಠ 2 ವರ್ಷ ಜೈಲು 2ಲಕ್ಷದವರೆಗೂ ದಂಡ ವಿಧಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಬಾಲ್ಯ ವಿವಾಹ ಕಂಡುಬಂದರೆ ಮಕ್ಕಳ ಸಹಾಯವಾಣಿ 1098ಗೆ ತಿಳಿಸಬಹುದು ಮತ್ತು ಹತ್ತಿರದ ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿ, ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿಸಲು ಸಲಹೆ ನೀಡಿದರು.
ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಮಂಜುನಾಥ್ ಅವರು ಮಾತನಾಡಿ 18 ಮಕ್ಕಳು ಮೊಬೈಲ್ ಮತ್ತು ಅಂತರ್ಜಾಲ ಬಳಸುವುದರಲ್ಲಿ ಜಾಗರೂಕರಾಗಿರಬೇಕು. 18 ವರ್ಷದೊಳಗಿನ ಮಕ್ಕಳು ಅಂತರ್ಜಾಲವನ್ನು ಬಳಸುವುದರಿಂದ ಅಪರಿಚಿತರು ಮಕ್ಕಳನ್ನು ಸುಲಭವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಂತರ್ಜಾಲದಿಂದ ಎಷ್ಟು ಲಾಭವಿದೆಯೋ ಅಷ್ಟೇ ಮಕ್ಕಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸಕೋಟೆ ತಾಲ್ಲೂಕು ಕಾರ್ಮಿಕ ನಿರೀಕ್ಷಕರಾದ ಯತೀಶ್, ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಮುಖ್ಯೋಪಾಧ್ಯಾಯರಾದ ಶಶಿಕಲಾ, ಗಿಡ್ಡಪ್ಪ ನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯ ಪ್ರೋಗ್ರಾಂ ಮ್ಯಾನೇಜರ್ ಸಣ್ಣಕರಿಯಪ್ಪ.ಡಿ, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಾದ ಮುರಳಿ ಮೋಹನ್.ಎಂ ಮತ್ತು ಮಂಜುನಾಥ.ಡಿ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….