Site icon ಹರಿತಲೇಖನಿ

ಡಿಸೆಂಬರ್ 22 ರಿಂದಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರಿಂದ ರಾಗಿ ಮತ್ತು ಬಿಳಿಜೋಳ ಖರೀದಿಗೆ ನೋಂದಣಿ ಆರಂಭ

Channel Gowda
Hukukudi trust

ಚಿಕ್ಕಬಳ್ಳಾಪುರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಬಿಳಿಜೋಳ ಮಾರಾಟ ಮಾಡಲು ಇಚ್ಚಿಸುವ ಜಿಲ್ಲೆಯ ಆಸಕ್ತ ರೈತರ ನೋಂದಣಿ ಪ್ರಕ್ರಿಯೆಯನ್ನು ಡಿಸೆಂಬರ್ 22 ರಿಂದಲೆ ಜಿಲ್ಲೆಯಲ್ಲಿ ಪ್ರಾರಂಭಿಸಲಾಗುತ್ತಿದ್ದು, ಆಸಕ್ತ ರೈತರು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ತೆರೆದಿರುವ ನೋಂದಣಿ ಕೇಂದ್ರಗಳನ್ನು ಸಂಪರ್ಕಿಸಿ ಕೂಡಲೆ ನೊಂದಣಿ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಲತಾ ಅವರು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ.

Aravind, BLN Swamy, Lingapura

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ರಾಗಿ ಮತ್ತು ಬಿಳಿಜೋಳ ಖರೀದಿ ಕುರಿತ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದ ನಿರ್ದೇಶನದನ್ವಯ 2021-22ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಆಸಕ್ತ ರೈತರಿಂದ ರಾಗಿ ಮತ್ತು ಬಿಳಿಜೋಳವನ್ನು ಖರೀದಿಸಲು ನಿರ್ಧರಿಸಲಾಗಿದೆ. ಪ್ರತಿ ಕ್ವಿಂಟಾಲ್ ರಾಗಿಗೆ ರೂ.3377 ಹಾಗೂ ಪ್ರತಿ ಕ್ವಿಂಟಾಲ್ ಬಿಳಿಜೋಳ-ಹೈಬ್ರೀಡ್-2738 ಮತ್ತು ಬಿಳಿಜೋಳ ಮಾಲ್ದಂಡಿ-2758 ರೂ.ಗಳನ್ನು ನಿಗದಿಗೊಳಿಸಲಾಗಿದೆ. ಸರ್ಕಾರವು ನಿಗದಿಪಡಿಸಿರುವ ಗುಣಮಟ್ಟಕ್ಕೆ (FAQ) ಅನುಗುಣವಾಗಿ ರಾಗಿ ಮತ್ತು ಬಿಳಿಜೋಳವನ್ನು ನೀಡಲು ಇಚ್ಚಿಸುವ ಜಿಲ್ಲೆಯ ರೈತರ ನೊಂದಣಿ  ಕಾರ್ಯವನ್ನು ಡಿಸೆಂಬರ್ 22 ರಿಂದ ಪ್ರಾರಂಭಿಸಲಾಗುವುದು ಎಂದರು.

Aravind, BLN Swamy, Lingapura

ಜಿಲ್ಲೆಯಲ್ಲಿ ರಾಗಿ ಬೆಳೆಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಜಿಲ್ಲೆಯಲ್ಲಿ ಬಿತ್ತನೆಯಾದ ಒಟ್ಟು ರಾಗಿ ಬೆಳೆಯಲ್ಲಿ ಶೇ.59 ರಷ್ಟು ಬೆಳೆಯು ಈ ವರ್ಷ ಸುರಿದ ಧಾರಕಾರ ಅತಿವೃಷ್ಟಿ ಮಳೆಗೆ ಹಾನಿಯಾಗಿದೆ. ಇನ್ನುಳಿದ ಬೆಳೆಗಾದರೂ ಸೂಕ್ತ ಬೆಲೆ ಸಿಗಬೇಕು ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ  ಈ ಯೋಜನೆಯು ಜಿಲ್ಲೆಯ ರೈತರಿಗೆ ಹೆಚ್ಚಿನ ಸಹಕಾರಿಯಾಗಲಿದೆ. ಸರ್ಕಾರ ನಿಗದಿಪಡಿಸಿರುವ ರಾಗಿ ಬೆಂಬಲ ಬೆಲೆ ದರವು ಮಾರುಕಟ್ಟೆ ಬೆಲೆಗಿಂತ ಅಧಿಕವಾಗಿದ್ದು, ರಾಗಿ ಮಾರಲಿಚ್ಚಿಸುವ ಜಿಲ್ಲೆಯ ಸಮಸ್ತ ರೈತ ಬಾಂದವರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು.

ಸಹಾಯವಾಣಿ ಆರಂಭ: ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಮತ್ತು ಜೋಳವನ್ನು ಮಾರಾಟ ಮಾಡಲು ಇಚ್ಚಿಸುವ ಜಿಲ್ಲೆಯ ರೈತರಿಗೆ ನೋಂದಣಿ ಹಾಗೂ ಮಾರಾಟದ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಸಮಸ್ಯೆಗಳು ಉಂಟಾದಲ್ಲಿ ಅಥವಾ ಹೆಚ್ಚಿನ ಮಾಹಿತಿಯ ಅಗತ್ಯವಿದ್ದಲ್ಲಿ 08156-277108 ಈ ಸಹಾಯವಾಣಿಗೆ ಕರೆ ಮಾಡಬಹುದು. ಅರ್ಹ ರೈತರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಕೋರಿದರು.

ರಾಗಿ ಮತ್ತು ಬಿಳಿಜೋಳ ಖರೀದಿಗೆ ಮಾರ್ಗಸೂಚಿಗಳೇನು?: ಖರೀದಿ ಏಜೆನ್ಸಿಗಳು ರಾಗಿ ಮತ್ತು ಬಿಳಿಜೋಳವನ್ನು ಖರೀದಿ ಹಂತದಲ್ಲಿ ಕೇಂದ್ರ ಸರ್ಕಾರವು ನಿಗಧಿಪಡಿಸಿದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಡೀಕರಿಸಲು ಕ್ರಮವಹಿಸಬೇಕು. ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ಆಗ್ಗಿಂದಾಗೆ ಮೇಲುಸ್ತುವಾರಿ ತಪಾಸಣೆ ಕೈಗೊಳ್ಳುವುದು ಹಾಗೂ ಆಹಾರ ಧಾನ್ಯಗಳನ್ನು ಉತ್ತಮ ಗುಣಮಟ್ಟದ ಗೋಣಿ ಚೀಲದಲ್ಲಿಯೇ ಸಂಗ್ರಹಿಸಿ ಖರೀದಿಸಲು ಮತ್ತು ಗೋಣಿ ಚೀಲ ಖರೀದಿ ವೆಚ್ಚವಾಗಿ ಪ್ರತಿ 50 ಕೆ.ಜಿ ಚೀಲಕ್ಕೆ ರೂ.22/- ರಂತೆ ನೇರ ನಗದು ವರ್ಗಾವಣೆ (Direct Benifit Transfer) ಮೂಲಕ ರೈತರಿಗೆ ಪಾವತಿಸಬೇಕು ಎಂದರು.

ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿ ಹಾಗೂ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 20 ಕ್ವಿಂಟಾಲ್ ಜೋಳವನ್ನು ಖರೀದಿಸಬಹುದು. ಸರ್ಕಾರವು ನಿಗಧಿಡಪಸಿರುವ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ರಾಗಿ ಹಾಗೂ ಜೋಳವನ್ನು ಖರೀದಿಸುವಂತಿಲ್ಲ. ಈ ಎಲ್ಲಾ ಅಂಶಗಳನ್ನು ಪಾಲಿಸಿಕೊಂಡು ಜಿಲ್ಲೆಯಲ್ಲಿ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ ಜಿಲ್ಲೆಯ ರೈತರು  ಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸುವಂತೆ ಕಟ್ಟು ನಿಟ್ಟಿನ ಸೂಚನೆಗಳನ್ನು ಜಿಲ್ಲಾಧಿಕಾರಿಗಳು ನೀಡಿದರು.

2021-22 ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ರಾಗಿ ಮತ್ತು ಜೋಳವನ್ನು ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತವನ್ನು ಸಂಗ್ರಹಣಾ ಏಜೆನ್ಸಿಯನ್ನಾಗಿ ಸರ್ಕಾರ ನೇಮಿಸಿದೆ. ಸರ್ಕಾರದ ನಿರ್ದೇಶನದಂತೆ ಸದರಿ ಯೋಜನೆಯಡಿ ರಾಗಿ ಮತ್ತು ಜೋಳವನ್ನು 2022ರ ಜನವರಿ 01  ರಿಂದ ಮಾರ್ಚ್ 31 ರವರೆಗೆ ಜಿಲ್ಲೆಯಲ್ಲಿ ಖರೀದಿಸಲಾಗುವುದು. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ರೈತರ ನೊಂದಣಿ ಕಾರ್ಯವನ್ನು ಡಿಸೆಂಬರ್ 22 ರಿಂದ ಆರಂಭಿಸಿ, 2022ರ ಜನವರಿ 1 ರಿಂದ ಖರೀದಿ ಪ್ರಕ್ರಿಯೆಯನ್ನು ಪ್ರಾಂಭಿಸುವಂತೆ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಕೂಡಲೇ ಪ್ರತಿಕ್ರಿಯಿಸಿದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೊಂದಣಿ ಹಾಗೂ ಖರೀದಿ ಕೇಂದ್ರಗಳ ವಿವರವನ್ನು ಸಭೆಗೆ ಸಲ್ಲಿಸಿದರು.

ಸಭೆಯಲ್ಲಿ ಆಹಾರ ಮತ್ತು ಸರಬರಾಜು ಇಲಾಖೆಯ ಉಪನಿರ್ದೇಶಕಿ ಸವಿತಾ, ಚಿಕ್ಕಬಳ್ಳಾಪರು ತಾಲ್ಲೂಕು ತಹಸೀಲ್ದಾರ್ ಗಣಪತಿಶಾಸ್ತ್ರಿ, ಆಹಾರ ಮತ್ತು ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಚೌಡೇಗೌಡ, ವಿವಿಧ ತಾಲ್ಲೂಕುಗಳ ಆಹಾರ ಶಿರಸ್ತೇದಾರ್ ಗಳು  ಹಾಗೂ ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version