![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ಚಿಕ್ಕಬಳ್ಳಾಪುರ: 2.9 ಮತ್ತು 3.0ರ ತೀವ್ರತೆಯ ಎರಡು ಭೂಕಂಪನಗಳು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 22ನೇ ಡಿಸೆಂಬರ್ ಮುಂಜಾನೆಯಲ್ಲಿ ಸಂಭವಿಸಿರುವುದು ದಾಖಲಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವು ಸ್ಪಷ್ಟಪಡಿಸಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಇಂದು ಮುಂಜಾನೆ 2 ಭಾರಿ ಭೂಕಂಪನದ ಅನುಭವವಾಗಿ ರಿಕ್ಟರ್ ಮಾಪನದಲ್ಲಿ 2.9 ಮತ್ತು 3.0 ತೀವ್ರತೆಯ ಭೂಕಂಪನ ದಾಖಲಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ತಾಲೂಕಿನ ಬಂಡಹಳ್ಳಿ ಮತ್ತು ಶೆಟ್ಟೆಗೆರೆ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯ ಜನರಿಗೆ ಧೈರ್ಯ ತುಂಬಿ ಮಾತನಾಡಿದರು.
ಒಂದು ಭೂಕಂಪನದ ಕೇಂದ್ರಸ್ಥಾನವು ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ ಗ್ರಾಮ ಪಂಚಾಯತಿಯಿಂದ ಸುಮಾರು 1.4 ಕಿಮೀ ದೂರದಲ್ಲಿ ದಾಖಲಾಗಿದೆ. ಇದು ಸುಮಾರು 2.9ರ ತೀವ್ರತೆಯನ್ನು ಹೊಂದಿದ್ದು 11 ಕೀಮೀ ದೂರದ ಭೂಗರ್ಭದಲ್ಲಿ ಕೇಂದ್ರೀಕೃತವಾಗಿದೆ ಹಾಗೂ ಮತ್ತೊಂದು ಭೂಕಂಪನವು ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಭೋಗಪರ್ತಿ ಗ್ರಾಮಕ್ಕೆ 1.23 ಕಿಮೀ ದೂರದಲ್ಲಿ ಮುಂಜಾನೆ 7.15ಕ್ಕೆ ಸಂಭವಿಸಿದ್ದು ಇದರ ತೀವ್ರತೆಯು 3.00ರಷ್ಟಿದ್ದು ಇದು ಭೂಗರ್ಭದ ಸುಮಾರು 23 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆಯೆಂದು ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವು ತಿಳಿಸಿದೆ ಎಂದರು.
ಭೂಕಂಪನದ ತೀವ್ರತೆಯ ನಕಾಶೆಯನ್ವಯ ಈ ಭೂಕಂಪಗಳ ತೀವ್ರತೆಯು ಅತ್ಯಂತ ಕನಿಷ್ಟ ಪ್ರಮಾಣದ್ದಾಗಿದ್ದು ಸುಮಾರು 10ರಿಂದ 15 ಕಿಮೀ ವ್ಯಾಪ್ತಿಯವರೆಗೆ ಭೂಕಂಪನದ ಅನುಭವವಾಗಿರಬಹುದೆಂದು ಅಂದಾಜಿಸಲಾಗಿದೆ. ಇದರ ಪರಿಣಾಮದಿಂದಾಗಿ ಭೂಮಿಯು ಅಲುಗಾಡಿದ ಅನುಭವವಾಗಿದ್ದರೂ ಸಹ ಈ ಪ್ರಮಾಣದ ಭೂಕಂಪನವು ಸ್ಥಳೀಯ ಸಮುದಾಯಕ್ಕೆ ಯಾವುದೇ ರೀತಿಯಲ್ಲಿಯೂ ಅಪಾಯಕಾರಿಯಲ್ಲವೆಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವು ತಿಳಿಸಿದ್ದು ಇದರಿಂದ ಜನರು ಗಾಬರಿಗೊಳ್ಳುವ ಹಾಗೂ ಹೆಚ್ಚಿನ ಆತಂಕಗೊಳ್ಳುವ ಅವಶ್ಯಕತೆಯಿಲ್ಲವೆಂದು ಎಂದು ಜಿಲ್ಲಾಧಿಕಾರಿಗಳು ತಿಳಿಸಿ ಸ್ಥಳೀಯರಿಗೆ ಮನೋಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ತಹಸಿಲ್ದಾರ್ ಗಣಪತಿ ಶಾಸ್ತ್ರೀ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. ಈ ವೇಳೆ ಆ ಗ್ರಾಮಗಳಲ್ಲಿ ವಿವಿಧ ಮನೆಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….