ಬೆಂಗಳೂರು: ನಮ್ಮ ಬಳಿ ಕಲಿತ ಅನೇಕ ಶಿಷ್ಯರು ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಖುಷಿ ತಂದಿದೆ. ಗುರುಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಇದು ಸಹಕಾರಿಯಾಗಿದೆ. ಶಿಸ್ತಿನ ಅಭ್ಯಾಸ, ಪ್ರಾಮಾಣಿಕ ಪ್ರಯತ್ನ, ಬದ್ಧತೆಯಿಂದ ಸಂಗೀತ ಕಲಿತಾಗ ಮಾತ್ರ ಗಾಯನ ಕ್ಷೇತ್ರದಲ್ಲಿ ಹೆಸರು ಮಾಡಲು ಸಾಧ್ಯವಾಗುತ್ತದೆ. ವಿದ್ಯೆಯನ್ನು ಕಲಿಯಬೇಕು ಅದನ್ನು ಹೊರತು ಕದಿಯಬಾರದು ಎಂದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ನಾಡಿನ ಹೆಸರಾಂತ ಗಾಯಕ ಹಾಗೂ ಸ್ವರ ಸಂಯೋಜಕರಾದ ಪಂಡಿತ್ ಬಸವರಾಜ್ ಮುಗಳಖೋಡ ಸಂಗೀತ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ನಗರದ ಮೈಸೂರು ರಸ್ತೆಯ ಮೆಟ್ರೋ ಸ್ಟೇಷನ್ ಬಳಿಯ ಶ್ರೀ ಆರೂಢ ಜ್ಞಾನಸಭಾಂಗಣ ಸಿದ್ಧಾರೂಢ ಆಶ್ರಮದಲ್ಲಿ ಚಿರಂತನ ಅಭಿವೃದ್ಧಿ ಪ್ರತಿಷ್ಠಾನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆನರಾ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ಇವರ ಸಹಕಾರದಲ್ಲಿ ನಡೆದ ಸ್ವರ ಚಿರಂತನ ಅರ್ಪಿಸುವ ವೈವಿಧ್ಯಮಯ ಕನ್ನಡ ಗೀತೆಗಳ ಗಾನಯಾನ ನಾದಝೇಂಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಧನೆಗೆ ಸತತ ಪರಿಶ್ರಮವೇ ಮುಖ್ಯ. ವಿದ್ಯೆಯೆಂಬ ಸಂಪತ್ತನ್ನ ಸಾಧನೆಯ ಅಭ್ಯಾಸದ ಮೂಲಕ ನಾವು ಡಿಪಾಜಿಟ್ ಮಾಡುತ್ತ ಹೋದರೆ ಯಾವಾಗ ಬೇಕಾದರೂ ಅದನ್ನು ಗಾಯನವೆಂಬ ವಿತ್ ಡ್ರಾ ಮೂಲಕ ಬಳಸಬಹುದು. ಸಾಧನೆ ಮಾಡದೆ ಯಾವುದನ್ನು ಬಳಸಲು ಆಗುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.
ನಾಡಿನ ಖ್ಯಾತ ಗಾಯಕಿ ಹಾಗೂ ಸಂಗೀತ ನಿರ್ದೇಶಕರಾದ ಸುಮಾ ಎಲ್.ಎನ್. ಶಾಸ್ತ್ರೀ ಅವರು ಮಾತನಾಡಿ, ಗುರುವಿನ ಮುಖೇನ ಕಲಿಯುವ ಶಿಕ್ಷಣಾರ್ಥಿಗಳು ಹೆಚ್ಚಾಗಬೇಕು. ನಾದಝೇಂಕಾರದಂತಹ ಶಾಸೀಯ ಸಂಗೀತ ಹಾಗೂ ವೈವಿಧ್ಯಮಯ ಕನ್ನಡ ಗೀತೆಗಳ ಪ್ರಸ್ತುತಿಯಿಂದ ಯುವ ಪ್ರತಿಭೆಗಳಿಗೆ ಅವಕಾಶದ ಜತೆಗೆ ಗುರುಪರಂಪರೆಯ ಸಂಗೀತ ಶಿಕ್ಷಣಕ್ಕೆ ಮುನ್ನುಡಿಯಾಗಲಿದೆ ಎಂದು ಹೇಳಿದರು.
ಸಂಗೀತ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಆಸಕ್ತಿಯಿಂದ ಕೇಳುವ, ಕಲಿಯುವ ಮತ್ತು ಅದನ್ನು ಪ್ರಸ್ತುತಿ ಪಡಿಸುವ ಕಲಿಕೆಗಳು ಇಂತಹ ಕಾರ್ಯಕ್ರಮಗಳಿಂದ ಹೆಚ್ಚಾಗಲಿದೆ. ಜಂಜಾಟದ ಜೀವನದಲ್ಲಿ ಸಂಗೀತ ಎಲ್ಲರಿಗೂ ಚಿಕಿತ್ಸೆ ರೂಪದಲ್ಲಿ ನಮಗೆ ಮಾನಸಿಕ ಶಾಂತಿಯನ್ನು ಹಾಗೂ ಶಾರೀರಿಕ ತಾಲೀಮು ಅನ್ನು ನೀಡುತ್ತದೆ. ಕೊರೊನಾ ಸಂದರ್ಭದಲ್ಲೂ ಇಷ್ಟುಂದು ಜನ ಸಭಿಕರು ಸೇರಿರುವುದು ಸಂಗೀತಕ್ಕಿರುವ ಶಕ್ತಿಯನ್ನು ತೋರಿಸುತ್ತದೆ ಎಂದರು.
ಸ್ವರ ಚಿರಂತನ, ನಾಟ್ಯಾಂಜನ, ಸಾಯಿ ಸ್ವರಾಂಜಲಿ, ಝೇಂಕಾರ ಭಾರತಿ ವಿದ್ಯಾರ್ಥಿಗಳಿಂದ ಹಾಗೂ ಹಿರಿಯ ಕಲಾವಿದರಿಂದ ವೈವುವಿಧ್ಯಮಯ ಗೀತಗಾಯನ ಹಾಗೂ ಭರತನಾಟ್ಯ ಕಾರ್ಯ ಸೊಗಸಾಗಿ ಮೂಡಿಬಂದಿತು. ಗಾಯಕ, ಗಾಯಕಿಯರಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಚಿರಂತನ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ವೀರೇಶ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರತಿಭಾ ಸಿ.ವಿ., ವಂದಿಸಿದರು. ಗುರುರಾಜ್ ನಿರೂಪಿಸಿದರು. ಶ್ರೀ ಆರೂಢ ಜ್ಞಾನ ಮಂದಿರದ ವ್ಯವಸ್ಥಾಪಕ ಪ್ರಕಾಶ್ ಬಾಗನ್ನವರ್, ಗುರುಶಾಂತನಂದ ಪ್ರೌಢಶಾಲೆಯ ಶಿಕ್ಷಕ ಆರ್.ಟಿ. ಹುದ್ದಾರ್, ಮ್ಯೂಸಿಕ್ ಇನ್ ಡಿವೈನ್ ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಕುಮಾರ್, ಜಾಗೃತಿ ಸಂಸ್ಥೆಯ ಅಧ್ಯಕ್ಷ ಬಿ.ನಾಗೇಶ್, ಶಿಕ್ಷಣ ತಜ್ಞೆ ಪ್ರೇಮ ಶಾಂತಕುಮಾರ್, ಸವಿತಾ ಕುಲಕರ್ಣಿ, ಬಸವರಾಜ್ ಅಜ್ಜಪ್ಪಘಿ, ಸೂರ್ಯಕಾಂತ್ ಬಿರಾದರ್, ಕಾರ್ತಿಕ್, ಕಿರುತೆರೆ ನಟಿ ರಶ್ಮಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜನಮನಸೂರೆಗೊಂಡ ಸಂಗೀತ: ಪಂಡಿತ್ ಬಸವರಾಜ ಮುಗಳಖೋಡ ಅವರು ಪ್ರಸ್ತುತಿ ಪಡಿಸಿದ ರಾಗ ಮಾಲ್‌ಕೌಂಸ್, ವಚನ ಕಂಸಾಳೆ, ಶಿಸುನಾಳ ಶರೀಪರ ತತ್ವಪದ, ಸಿದ್ಧರೂಢರ ಭಕ್ತಿಗೀತೆಗಳು ನಗರದ ಜನತೆಗೆ ಮುದ ನೀಡಿದವು.
ಗಾಯಕಿ ಸುಮಾ ಎಲ್. ಎನ್ ಶಾಸ್ತ್ರೀ ವಚನ, ಭಜನ್, ಭಕ್ತಿಗೀತೆಗಳನ್ನು ಸೂಶ್ರವ್ಯವಾಗಿ ಸಂಗೀತ ಉಣಬಡಿಸಿದರು. ಪ್ರತಿಭಾ ವೀರೇಶ್ ಹಾಗೂ ಸ್ವರಚಿರಂತನ ತಂಡ ಜನಪದ, ದೇಶಭಕ್ತಿಗೀತೆ, ವಚನಗಾಯನ ಪ್ರಸ್ತುತಿ ಪಡಿಸಿದರು.
ವಾದ್ಯ ಸಹಕಾರದಲ್ಲಿ ವಿದ್ವಾನರುಗಳಾದ ಶ್ರೀನಿವಾಸಯ್ಯ ಜಿ. ಕೀಬೋರ್ಡ್ ನುಡಿಸಿದರು. ನವನೀತ್ ಶ್ಯಾಂ ಹಾರ್ಮೋನಿಯಂ ಸಾಥ್ ನೀಡಿದರು. ರಾಘವೇಂದ್ರ ಜೋಷಿ ಅವರು ತಬಲಾ ಸಾಥ್ ನೀಡಿದರು. ಶಶಿದರ್ ಅವರು ರಿಂದಂ ಪ್ಯಾಡ್ ನುಡಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….