ಶಿವಮೊಗ್ಗ: ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಕೆಲವರಿಂದ ಗಲಭೆ ಮಾಡಲಾಗುತ್ತಿದೆ. ಹಿರಿಯ ಮಹಾತ್ಮರ ಪುತ್ಥಳಿ ಹಾಳು ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ನಾಳೆ ವಿಧಾನಮಂಡಲದಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರು ಕಠಿಣ ಕ್ರಮ ಜರುಗಿಸುವಂತೆ ಗೃಹ ಸಚಿವರಿಗೆ ತಿಳಿಸಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ 23 ಜನರನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಈ ಘಟನೆಯಲ್ಲಿ ಇನ್ನೂ ಯಾರು ಯಾರು ಶಾಮೀಲಾಗಿದ್ದಾರೆಯೋ ಅವರನ್ನು ಬಂಧಿಸುವ ಕೆಲಸ ಮುಂದುವರಿಯುತ್ತದೆ.
ವಿಧಾನ ಮಂಡಲದಲ್ಲಿ ವ್ಯಾಪಕ ಚರ್ಚೆ ಮಾಡಿ ಇನ್ನು ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅಪರಾಧಿಗಳು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿಯವರನ್ನು ಕೇಳಬೇಕು. ನನಗೆ ಗೊತ್ತಿರುವಂತೆ ಇದುವರೆಗೆ ಸಚಿವ ಸಂಪುಟ ವಿಸ್ತರಣೆಯ ಯಾವುದೇ ಸುದ್ದಿಗಳು ಇಲ್ಲ. ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅದು ಹೈಕಮಾಂಡ್ ಹಾಗೂ ಸಿಎಂಗೆ ಬಿಟ್ಟ ವಿಚಾರ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….