ಬೆಳಗಾವಿ: ತಾವಾಡಿದ ಮಾತುಗಳು ರಾಷ್ಟ್ರಾದ್ಯಂತ ಪ್ರತಿಧ್ವನಿಸಿ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಾಧ್ಯಮಗಳ ಮೇಲೆ ಸಿಟ್ಟಾಗಿದ್ದಾರೆ.
ಸುವರ್ಣಸೌಧಕ್ಕೆ ಬಂದ ಅವರನ್ನು ಎಂಇಎಸ್ ಪುಂಡಾಟಿಕೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ನೀಡಲು ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು.
ಮಾಧ್ಯಮಗಳ ಮುಂದೆ ಬಂದ ಬಂದ ಅವರು ಜೀವಂತ ಇರುವವರನ್ನು ಮಾತನಾಡಿಸಿ, ನಾನು ಜೀವಂತ ಇಲ್ಲ. ನಾಲ್ಕುದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ ಎಂದು ಕೈ ಮುಗಿದು ಒಳ ಹೋದರು.
ಪ್ರಚಲಿತ ವಿಷಯಗಳ ಬಗ್ಗೆ ಉತ್ಸಾಹದಿಂದ ಪ್ರತಿಕ್ರಿಯೆ ನೀಡುತ್ತಿದ್ದ ಅವರು ಈ ರೀತಿ ಮಾತನಾಡಿದ್ದು ಆಶ್ಚರ್ಯ ಉಂಟು ಮಾಡಿತು. ಇದು ಮಾಧ್ಯಮಗಳ ಮೇಲೆ ಅವರಿಗೆ ಉಂಟಾಗಿರುವ ಸಿಟ್ಟಿನ ಸಂಕೇತವೂ ಆಗಿರಬಹುದು ಎಂದು ಹೇಳಲಾಗುತ್ತಿದೆ.
ಸದನದಲ್ಲಿ ಬೆಳೆ ನಷ್ಟ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಅವರಾಡಿದ ಮಾತುಗಳು ಸಂವೇದನಾಶೀಲರ ಸಿಟ್ಟಿಗೆ ಕಾರಣವಾಗಿತ್ತು. ಪಕ್ಷಬೇಧವಿಲ್ಲದೇ ಎಲ್ಲರೂ ಆ ಮಾತುಗಳನ್ನು ಖಂಡಿಸಿದ್ದರು. ಇದರಿಂದ ಕಾಂಗ್ರೆಸ್ ಕೂಡ ಮುಜುಗರಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….