![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ದೊಡ್ಡಬಳ್ಳಾಪುರ: ತಾಲ್ಲೂಕಿನ ಕಸ ಕಂಟಕ ಬೆಳಗಾವಿಯ ಸುವರ್ಣ ಸೌಧ ತಲುಪಿ ಸುಮಾರು 20 ನಿಮಿಷಗಳ ಕಾಲ ತೀವ್ರ ಚರ್ಚೆ ನಡೆದು, ತ್ಯಾಜ್ಯ ಬರುವುದನ್ನು ನಿಲ್ಲಿಸುವಂತೆ ಶಾಸಕ ಟಿ.ವೆಂಕಟರಮಣಯ್ಯ ಸದನದ ಬಾವಿಗಿಳಿದರು ಸಹ ಯಾವುದೇ ತಾರ್ಕಿಕ ಅಂತ್ಯಕಂಡಿಲ್ಲ.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ಬಿಬಿಎಂಪಿ ವ್ಯಾಪ್ತಿಯ ಕಸ ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್ಜಿಪಿ ಕಸ ವಿಲೇವಾರಿ ಘಟಕ ಬಂದು ಸೇರುತ್ತಿದೆ. ಈ ಕಸ ಸೃಷ್ಠಿಸಿರುವ ಅವಾಂತರದ ವಿರುದ್ಧ ಸ್ಥಳೀಯ ಗ್ರಾಮಸ್ಥರು 10 ದಿನಗಳ ಕಾಲ ಧರಣಿ ನಡೆಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗಾರಾಜ್ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.
ಡಿ.15ರ ಬುಧವಾರದ ಸಂಜೆ ವಿಧಾನ ಸಭೆಯ ಚಳಿಗಾಲದ ಅಧಿವೇಶನದಲ್ಲಿ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ಗಮನ ಸೆಳೆಯುವ ಪ್ರಶ್ನೆ ಕೇಳುವ ಮೂಲಕ ಸದನದ ಗಮನ ಸೆಳೆದರು.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ಶಾಸಕರ ಬೆಂಬಲಕ್ಕೆ ಶಾಸಕರಾದ ಕೃಷ್ಣಬೈರೇಗೌಡ, ಸಿ.ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್ ಅವರು ನಿಂತು ಮಾತನಾಡಿದ್ದರು ಸಹ ಸಮಸ್ಯೆ ಪರಿಹಾರಕ್ಕೆ ಸೂಕ್ತ ಪರಿಹಾರ ದೊರೆತಿಲ್ಲ.
ಚರ್ಚೆಯ ವೇಳೆ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ನಿರ್ವಹಣೆಗೆ ಕ್ರಮಕೈಗೊಳ್ಳಲಾಗಿದೆ. ದೊಡ್ಡಬಳ್ಳಾಪುರದ ಎಂಎಸ್ ಜಿಪಿ ಘಟಕಕ್ಕೆ ಬಿಬಿಎಂಪಿ ಕಸ ಬರುವುದು ನಿಲ್ಲಿಸಲು ಸಾಧ್ಯವೇ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಉತ್ತರಿಸಿದರು. ಇದರಿಂದ ಕೆರಳಿದ ಶಾಸಕ ಟಿ.ವೆಂಕಟರಮಣಯ್ಯ ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು.
ಈ ವೇಳೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾನೂನು ಸಚಿವರಿಂದ ಬಿಬಿಎಂಪಿ ತ್ಯಾಜ್ಯ ನಿಲ್ಲಿಸುವ ಕುರಿತು ಸ್ಪಷ್ಟ ಉತ್ತರ ನೀಡುವಂತೆ ಕೇಳಿದರು. ನಂತರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸುವುದಾಗಿ ಸಚಿವ ಮಾಧುಸ್ವಾಮಿ ಅವರು ಉತ್ತರ ನೀಡಿದರು.
ಸಚಿವರ ಉತ್ತರ ಕಸ ವಿಲೇವಾರಿ ಘಟಕದ ಸುತ್ತಲಿನ ಗ್ರಾಮಸ್ಥರ ಕೋಪವನ್ನು ಮತ್ತಷ್ಟು ಕೆರಳಿಸಿದೆ. ಹೀಗಾಗಿ ಕಸ ಕಂಟಕದ ವಿರುದ್ಧ ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ಕಸದ ಲಾರಿಗಳು ಇಲ್ಲಿಗೆ ಬಾರದಂತೆ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಿವಿಧ ಪಕ್ಷ ಹಾಗೂ ಸಂಘಟನೆಗಳವರು ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹೋರಾಟ ಬೇಡ. ಚುನಾವಣೆ ನಂತರ ಹೋರಾಟವನ್ನು ತೀವ್ರಗೊಳಿಸುವ ಎಂದಿದ್ದರು. ಈಗ ಎಲ್ಲಾ ಚುನಾವಣೆಗಳು ಮುಕ್ತಾಯವಾಗಿವೆ. ಬಿಬಿಎಂಪಿ ಕಸ ಬರುವುದನ್ನು ನಿಲ್ಲಿಸುವ ಲಕ್ಷಣವು ಮಾತ್ರ ಕಾಣುತ್ತಿಲ್ಲ. ಹೀಗಾಗಿ ಮತ್ತೆ ಹೋರಾಟ ಅನಿವಾರ್ಯವಾಗಿದೆ ಎನ್ನುತ್ತಾರೆ ಭಕ್ತರಹಳ್ಳಿ, ತಣ್ಣೀರನಹಳ್ಳಿ, ಕಾಡತಿಪ್ಪೂರು ಭಾಗದ ಜನರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….