ಬೆಂ.ಗ್ರಾ.ಜಿಲ್ಲೆ: ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಜಾರಿಗೆ ತಂದಿರುವ ಇ-ಶ್ರಮ್ ಯೋಜನೆಯಡಿ ಜಿಲ್ಲೆಯಲ್ಲಿರುವ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಡಿಸೆಂಬರ್ ಅಂತ್ಯದೊಳಗೆ ನೋಂದಣಿ ಮಾಡಿಸಬೇಕು ಎಂದು ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಪ್ರಜ್ವಲ್ ಕರೆ ನೀಡಿದ್ದಾರೆ.
ಇ-ಶ್ರಮ್ ಯೋಜನೆಯಡಿ ನೋಂದಣಿ ಮಾಡಿಸಿಕೊಂಡರೆ ಕಾರ್ಮಿಕರು ಒಂದು ವರ್ಷಕ್ಕೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಆಕಸ್ಮಿಕ ಸಾವು ಅಥವಾ ಪೂರ್ಣ ಅಂಗವೈಕಲ್ಯತೆಗೆ ರೂ 2 ಲಕ್ಷ ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ಪರಿಹಾರವನ್ನು ಪಡೆಯಬಹುದಾಗಿದೆ. ಜೊತೆಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಮತ್ತು ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದಲ್ಲದೇ ವಲಸೆ ಕಾರ್ಮಿಕರ ಉದ್ಯೋಗಾವಕಾಶಕ್ಕೂ ಸಹಾಯಕವಾಗಲಿದೆ ಎಂದಿದ್ದಾರೆ.
16 ರಿಂದ 59 ವರ್ಷದೊಳಗಿನ ವಯೋಮಾನದ ಅಸಂಘಟಿತ ಕಾರ್ಮಿಕರು ಆಧಾರ್ ಕಾರ್ಡ್, ಸಕ್ರಿಯ ಬ್ಯಾಂಕ್ ಖಾತೆ ಪಾಸ್‌ಬುಕ್ ಮತ್ತು ಸಕ್ರಿಯ ದೂರವಾಣಿ ಸಂಖ್ಯೆಯ ವಿವರಗಳನ್ನು ಇ-ಶ್ರಮ್ ಪೋರ್ಟಲ್‌ನಲ್ಲಿ ನಮೂದಿಸುವ ಮೂಲಕ ನೇರವಾಗಿ ತಮ್ಮ ಸ್ಮಾರ್ಟ್ ಫೋನ್‌ನಲ್ಲೇ ನೋಂದಣಿ ಮಾಡಿಕೊಳ್ಳಬಹುದು. ಇಲ್ಲವೆ ತಮಗೆ ಸಮೀಪವಿರುವ ಸಾಮಾನ್ಯ ಸೇವಾ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿಗೆ ಯಾವುದೇ ರೀತಿಯ ತೊಡಕುಂಟಾದಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಕಾರ್ಮಿಕ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಮತ್ತು ಸಹಾಯ ಪಡೆದು ನೋಂದಣಿ ಮಾಡಿಕೊಳ್ಳಬಹುದು ಎಂದರು.
ಸಂಪೂರ್ಣ ಉಚಿತ: ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಕೇಂದ್ರದವರೆಗೆ ಜಿಲ್ಲೆಯಾದ್ಯಂತ 220 ಸಾಮಾನ್ಯ ಸೇವಾ ಕೇಂದ್ರಗಳಿವೆ. ಸಾರ್ವಜನಿಕರು ತಮ್ಮ ಸಮೀಪದ ಕೇಂದ್ರಗಳಿಗೆ ತೆರಳಿ ನೋಂದಾಯಿಸಿಕೊಳ್ಳಬಹುದು. ಅರ್ಜಿ ನೋಂದಣಿ ಮಾಡಲು ಹಾಗೂ ನೋಂದಣಿಯಾದ ಪ್ರತಿಯನ್ನು ಪಡೆಯಲು ಪ್ರತಿ ನೋಂದಣಿಗೆ ಸಂಬಂಧಿತ ಸಾಮಾನ್ಯ ಸೇವಾ ಕೇಂದ್ರಗಳಿಗೆ ಕೇಂದ್ರ ಸರ್ಕಾರವೇ ಸೇವಾ ಶುಲ್ಕ ನೀಡಲಿದೆ. ನೋಂದಣಿ ಮಾಡಲು ಹಣದ ಬೇಡಿಕೆ ಇಡುವ ಸಾಮಾನ್ಯ ಸೇವಾ ಕೇಂದ್ರಗಳನ್ನು ಕೂಡಲೇ ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಡಿಸೆಂಬರ್ ಅಂತ್ಯಕ್ಕೆ ನೋಂದಣಿ ಮುಗಿಸಿ: ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ರೈತರು, ಮೀನುಗಾರರು, ಪಶು ಸಂಗೋಪನಗಾರರು, ನೇಕಾರರು, ಬಡಗಿ ಕೆಲಸಗಾರರು, ಆಶಾ ಕಾರ್ಯಕರ್ತರು, ಫೋಟೋಗ್ರಾಫರ್‌ಗಳು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಮನೆಕೆಲಸಗಾರರು, ಪತ್ರಿಕೆ ಮಾರಾಟಗಾರರು, ಚಾಲಕರು, ಕೂಲಿ ಕಾರ್ಮಿಕರು (ನರೇಗಾ) ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಸ್ಥರು, ಚರ್ಮ ಕೈಗಾರಿಕಾ ಕಾರ್ಮಿಕರು, ಆನ್ ಲೈನ್ ಸೇವಾ ಕಾರ್ಮಿಕರು, ಟೈಲರ್‌ಗಳು, ಹೊಟೇಲ್ ಕಾರ್ಮಿಕರು, ಬೇಕರಿ ವ್ಯಾಪಾರಸ್ಥರು, ವಲಸೆ ಕಾರ್ಮಿಕರು, ಮತ್ತು ಮೆಕಾನಿಕ್ ಹಾಗೂ ಇನ್ನಿತರ ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬಹುದು ಎಂದವರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….