ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಶೇ.99.91ರಷ್ಟು ಮತದಾನ ನಡೆದಿದೆ.
ಒಟ್ಟು 3923 ಮತದಾರರಲ್ಲಿ 1868 ಪುರುಷ ಮತ್ತು 2055 ಮಹಿಳಾ ಮತದಾರರ ಪೈಕಿ, 1865 ಪುರುಷ ಮತ್ತು 2044 ಮಹಿಳಾ ಮತದಾರರು ಸೇರಿದಂತೆ ಒಟ್ಟು 3918 ಮಂದಿ ಮತಚಲಾಯಿಸಿದ್ದಾರೆ.
ಹೊಸಕೋಟೆ ತಾಲ್ಲೂಕಿನಲ್ಲಿ 582 ಮತದಾರರ ಪೈಕಿ 579 ಮತದಾರರು, ದೇವನಹಳ್ಳಿ ತಾಲ್ಲೂಕಿನಲ್ಲಿ 396 ಮತದಾರರ ಪೈಕಿ 396, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 515 ಮತದಾರರ ಪೈಕಿ 515, ನೆಲಮಂಗಲ ತಾಲ್ಲೂಕಿನಲ್ಲಿ 371ಮತದಾರರ ಪೈಕಿ 371, ಮಾಗಡಿ ತಾಲ್ಲೂಕಿನಲ್ಲಿ 479 ಮತದಾರರ ಪೈಕಿ 479, ರಾಮನಗರ ತಾಲ್ಲೂಕಿನಲ್ಲಿ 390 ಮತದಾರರ ಪೈಕಿ 390, ಕನಕಪುರ ತಾಲ್ಲೂಕಿನಲ್ಲಿ
677 ಮತದಾರರ ಪೈಕಿ 675 ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ 513 ಮತದಾರರ ಪೈಕಿ 513 ಮತದಾರರು ಮತಚಲಾಯಿಸಿದ್ದಾರೆ.
ಹೊಸಕೋಟೆ ತಾಲ್ಲೂಕಿನಲ್ಲಿ 99.48%, ದೇವನಹಳ್ಳಿ ತಾಲ್ಲೂಕಿನಲ್ಲಿ 100%, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಶೇ.100%, ನೆಲಮಂಗಲ ತಾಲ್ಲೂಕಿನಲ್ಲಿ ಶೇ.100%, ಮಾಗಡಿ ತಾಲ್ಲೂಕಿನಲ್ಲಿ ಶೇ.100%, ರಾಮನಗರ ತಾಲ್ಲೂಕಿನಲ್ಲಿ ಶೇ. 100%, ಕನಕಪುರ ತಾಲ್ಲೂಕಿನಲ್ಲಿ ಶೇ.99.85% ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ ಶೇ.100% ರಷ್ಟು ಮತದಾನ ನಡೆದಿದೆ.
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ಶುಕ್ರವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೆ ಶೇ.100 ಮತದಾನವಾಗಿದೆ.
ತಾಲೂಕಿನಲ್ಲಿ 250 ಪುರುಷ ಮತದಾರರು, 265 ಮಹಿಳಾ ಮತದಾರರು ಸೇರಿದಂತೆ ಒಟ್ಟು 515 ಮತದಾರರಿದ್ದು, ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾದರೂ 10 ಗಂಟೆಯ ವೇಳೆಗೆ ಶೇ.2ರಷ್ಟು ಮಾತ್ರ ಮತದಾನವಾಗಿತ್ತು. ಮಧ್ಯಾಹ್ನ 2 ಗಂಟೆ ವೇಳೆಗೆ ಶೇ.72 ಮತದಾನವಾಗಿತ್ತು. ಮತಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು ಮತದಾರರ ಕೈಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳ ಬಿಡುತ್ತಿದ್ದರು.
ಶಾಸಕ ಟಿ.ವೆಂಕಟರಮಣಯ್ಯ ನಗರಸಭೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ವೇಳೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಗರಸಭಾ ಸದಸ್ಯರು ಸಹ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತ ಕೇಂದ್ರಗಳ ಮುಂದೆ ಮತದಾರ ಜನಪ್ರತಿನಿಧಿಗಳೊಂದಿಗೆ ಪಕ್ಷದ ಮುಖಂಡರು ಗ್ರೂಪ್ ಪೊಟೋ ತೆಗೆಸಿಕೊಳ್ಳುತ್ತಿದ್ದ ದೃಶ್ಯಕಂಡು ಬಂದಿತು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ 28 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆಯಾ ಗ್ರಾಮ ಪಂಚಾಯಿತಿಗಳು ಹಾಗು ಸ್ಥಳೀಯ ಸಂಸ್ಥೆಗಳ ಕಾರ್ಯಾಲಯಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಡಿ-ಮಸ್ಟರಿಂಗ್ ಕಾರ್ಯವು ತಾಲೂಕು ಆಡಳಿತ ಸೌಧದಲ್ಲಿ ನಡೆಯಿತು. ತಹಸೀಲ್ದಾರ್ ಟಿ.ಎಸ್.ಶಿವರಾಜ್ ಹಾಗೂ ಚುನಾವಣಾ ಸಿಬ್ಬಂದಿ ಹಾಜರಿದ್ದರು.
ಮತಗಟ್ಟೆಗಳಲ್ಲಿ ಮತದಾನದ ದಿನದಂದು ಕಾರ್ಯನಿರ್ವಹಿಸಲು 64 ಮತಗಟ್ಟೆ ಅಕಾರಿಗಳು, 32 ಎಂ.ಓ, 28 ವಿಡಿಯೋ ಗ್ರಾಫರ್‍ಗಳನ್ನು ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
28 ಮತಗಟ್ಟೆಗಳ ಪೈಕಿ 9 ಸಾಮಾನ್ಯ, 12 ಸೂಕ್ಷ್ಮ, 7 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿತ್ತು.
ಡಿ.14ರಂದು ದೇವನಹಳ್ಳಿಯ ಆಕಾಶ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಕ್ಷೇತ್ರದ 8 ತಾಲೂಕುಗಳ ಮತ ಎಣಿಕೆ ಕಾರ್ಯ ನಡೆಯಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….