ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಬಿಜೆಪಿ ಅಭ್ಯರ್ಥಿ ಬಿ.ಸಿ.ನಾರಾಯಣಸ್ವಾಮಿ ಅವರಿಗೆ ಮತ ಹಾಕಿದರೆ ಕ್ಷೇತ್ರದ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜು ಮಾತಯಾಚನೆ ಮಾಡಿದರು.
ಅವರು ನಗರದ ಪಾಲನಜೋಗಿಹಳ್ಳಿ ಪ್ರೆಂಡ್ಸ್ ಪಂಕ್ಷನ್ ಹಾಲ್ನಲ್ಲಿ ಬುಧವಾರ ನಡೆದ ವಿಧಾನ ಪರಿಷತ್ ಸ್ಥಾನದ ಸ್ಪರ್ಧಿ ಬಿಜೆಪಿ ಬಿ.ಸಿ.ನಾರಾಯಣಸ್ವಾಮಿ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ರಾಜ್ಯದಲ್ಲಿ ಅಧಿಕಾರ ಇಲ್ಲದ ಕಾರಣ ಆ ಪಕ್ಷದ ಅಭ್ಯರ್ಥಿಗಳು ಗೆದ್ದರೆ ಅಭಿವೃದ್ಧಿ ಶೂನ್ಯವಾಗಲಿದೆ. ಹೀಗಾಗಿ ಆಡಳಿತ ಪಕ್ಷವಾದ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕು. ಹೀಗಾಗಿ ಮತದಾರರು ಕ್ಷಣಿಕ ಲಾಭದ ಆಮಿಷಗಳಿಗೆ ಒಳಗಾಗದೆ ಅಭಿವೃದ್ಧಿಪರ ಮತ ಚಲಾಯಿಸುವಂತೆ ಮನವಿ ಮಾಡಿದರು.
ತೋಳ್ಬಲ-ಹಣಬಲ-ರಾಜಕೀಯ ಬಲಗಳು ಸಾಮಾನ್ಯರನ್ನು ಶಾಸನ ಮಾಡುತ್ತಿವೆ. ಈ ಹಂತದಲ್ಲಿ ಸಂವಿಧಾನ ನೀಡಿರುವ ಮತದಾನದ ಹಕ್ಕಿನ ಮೂಲಕ ಉತ್ತಮ ಆಡಳಿತ ಮಾಡುವ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ. ಭ್ರಷ್ಟಾಚಾರ ಮತಯಂತ್ರಗಳಿಗೂ ಅಂಟಿಕೊಂಡಿರುವ ಪರಿಣಾಮ ಉತ್ತಮ ಅಭ್ಯರ್ಥಿಗಳು ಆಯ್ಕೆಯಾಗುವಲ್ಲಿ ವೈಪಲ್ಯ ಕಾಣುತ್ತಿದ್ದೇವೆ. ಹೀಗಾಗಿ ಪ್ರಾಮಾಣಿಕವಾಗಿ ನಿಮ್ಮ ಮತವನ್ನು ಚಲಾಯಿಸಿ. ಸಾಮಾನ್ಯರು ಸಹ ಪ್ರಜಾಪ್ರಭುತ್ವದಲ್ಲಿ ಪ್ರಭುಗಳಾಗಿ ಬದುಕಲು ಸಾಧ್ಯವಾಗುತ್ತದೆ. ಈ ಹಂತದಲ್ಲಿ ಎಂಎಲ್ಸಿ ಚನಾವಣೆಯಲ್ಲಿ ಅಭಿವೃದ್ಧಿ ಪರವಾಗಿ ನಿಮ್ಮ ಮತ ಪಾರದರ್ಶಕವಾಗಿರಲಿ ಎಂದರು.
ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿ ಬಿ.ಸಿ.ನಾರಾಯಣಸ್ವಾಮಿ ಮಾತನಾಡಿ, ಪಕ್ಷವೇ ಆಡಳಿತ ಪಕ್ಷವಾಗಿರುವುದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅಭಿವೃದ್ಧಿ ಹಂತದಲ್ಲಿ ಪ್ರಾಮಾಣಿಕ ಆಡಳಿತ ನೀಡುವಲ್ಲಿ ನಿರಂತರ ಶ್ರಮಿಸುತ್ತೇನೆ ಎಂದರು.
ಬಿಜೆಪಿ ಹಿರಿಯ ಮುಖಂಡ ಕೆ.ಎಂ.ಹನುಮಂತರಾಯಪ್ಪ, ನಾಗರಾಜು, ಚಂದ್ರಪ್ಪ, ಅಶ್ವತ್ಥನಾರಾಯಣಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ನಾಗರಾಜು, ನಗರ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ನಗರಸಭೆ ಅಧ್ಯಕ್ಷ ಎಸ್.ಸುಧಾರಾಣಿ ಲಕ್ಷ್ಮಿನಾರಾಯಣ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮಿನಾರಾಯಣ್, ರಾಜ್ಯ ಸಾಮಾಜಿಕ ಜಾಲತಾಣ ಶಿವಾನಂದ ರೆಡ್ಡಿಹಾಗೂ ನಗರಸಭಾ ಸದಸ್ಯರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….