Site icon ಹರಿತಲೇಖನಿ

ರೋಜಿಪುರದ ಸ್ಮಶಾನದಲ್ಲಿ ಮೌಢ್ಯ, ಕಂದಾಚಾರಗಳ ವಿರುದ್ಧ ಜಾಗೃತಿ ಸಮಾವೇಶ

Channel Gowda
Hukukudi trust

ದೊಡ್ಡಬಳ್ಳಾಪುರ: ದಲಿತರಿಗೆ ಸ್ವಾತಂತ್ರ್ಯ ಮತ್ತು ಸ್ವಾಭಿಮಾನ ತಂದುಕೊಟ್ಟ ಅಂಬೇಡ್ಕರ್‌ ಅವರ ಆಶಯಗಳು ಚಿಗುರೊಡೆದು ಮುರುಟಿ ಹೋದಂತಾಗಿದೆ. ಮೌಢ್ಯ ಮತ್ತು ಕಂದಾಚಾರಗಳು ದೈನಿಕವಾಗಿದೆ. ವಿದ್ಯುನ್ಮಾಧ್ಯಮಗಳಲ್ಲಿನಿತ್ಯ ಭವಿಷ್ಯ ವಿಜೃಂಭಿಸುತ್ತಿದೆ.  ಶಿಕ್ಷಣ ಕೂಡ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಲು ವಿಫಲವಾಗಿದೆ ಎಂದು ದಲಿತ ಮುಖಂಡ ಮಾ.ಮುನಿರಾಜು ತಿಳಿಸಿದರು.

Aravind, BLN Swamy, Lingapura

ನಗರದ ರೋಜಿಪುರದಲ್ಲಿನ ಸಾರ್ವಜನಿಕ ಸ್ಮಶಾನದಲ್ಲಿ ಸೋಮವಾರ ನಡೆದ ಮೌಢ್ಯ ಮತ್ತು ಕಂದಾಚಾರ ವಿರೋಧಿ ಸಮಾರಂಭದಲ್ಲಿ ಅವರು ಮಾತನಾಡಿದರು.

ದೊಡ್ಡಬಳ್ಳಾಪುರದ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಂಬೇಡ್ಕರ್‌ ಪರಿನಿರ್ವಾಣದ ಅಂಗವಾಗಿ ಈ ವಿಶಿಷ್ಟ ಜಾಗೃತಿ ಸಭೆಯನ್ನು ಆಯೋಜಿಸಿತ್ತು. 

Aravind, BLN Swamy, Lingapura

ಶಿಕ್ಷಣ ಸಂಸ್ಥೆಗಳು ಪರೀಕ್ಷೆಗಳಲ್ಲಿ ಮಿಂದೇಳುತ್ತಿದೆ. ನೆನಪನ್ನು ಕಾರಿಕೊಂಡು ಬಾಯಿ ತೊಳೆದುಕೊಳ್ಳುವ ಇಲ್ಲಿನ ಪದ್ಧತಿಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಾಮಾಜಿಕ ಪ್ರಜ್ಞೆ, ಸಮಾನತೆ, ಸಮಾನ ಗೌರವ ಮೂಡಿಸುವ ಜಾಗೃತಿಗೆ ದೊಡ್ಡ ಹೋರಾಟವನ್ನು ಕಟ್ಟಬೇಕಾಗಿದೆ. 

ಪ್ರಗತಿಪರ ಚಿಂತಕ ಯೋಗೇಶ್‌ ಮಾಸ್ಟರ್‌ ಮಾತನಾಡಿ  ಯೋಗೇಶ್‌ ಮಾಸ್ಟರ್‌ಅಂಬೇಡ್ಕರ್‌ ಕೇವಲ ವ್ಯಕ್ತಿಯಲ್ಲ ಅವರೊಂದು ಚೈತನ್ಯ. ಪೂಜೆ, ಹೂವಿನ ಹಾರ ಹಾಕುವುದನ್ನು ಮರೆತರೂ  ಹೃದಯ ಮತ್ತು ನಮ್ಮ ಪ್ರಜ್ಞೆಯಲ್ಲಿರುವ  ಆ ಚೈತನ್ಯ ಶಕ್ತಿಯನ್ನು ಮರೆಯಬಾರದು, ಎಂದರು.  ‘ಅರಿವೇ ಬಾಬಾ. ಇದನ್ನು ಸದಾ ಜಗೃತವಾಗಿಟ್ಟುಕೊಳ್ಳಲು  ಅಂಬೇಡ್ಕರ್‌ ಪ್ರತಿಮೆ ಬೇಕು. ಈ ಅರಿವು ನಮ್ಮನ್ನು ಸ್ವಮುಖಿಗಳನ್ನಾಗಿಸುವುದಿಲ್ಲ. ಸಮಾಜ ಮುಖಿಗಳನ್ನಾಗಿಸುತ್ತದೆ. ಅಹಂಕಾರವೆಂಬುದು ಸ್ವಾಭಿಮಾನವಲ್ಲ. ದಕ್ಷಿಣ ಆಫ್ರಿಕಾದ ಉಡುಂಬು ಬುಡಕಟ್ಟು ಸಮುದಾಯ ನನ್ನ ಆನಂದ ನಮ್ಮ ಆನಂದದಲ್ಲಿದೆ. ನನ್ನ ಏಳಿಗೆ ನಮ್ಮ ಏಳಿಗೆಯಲ್ಲಿದೆ. ಎಲ್ಲವನ್ನೂ ನಮ್ಮ ಎಂದು ಭಾವಿಸುವುದು ಈ ಬುಡಕಟ್ಟಿನ ಮನೋಭಾವ. ಇದನ್ನು ಅಂಬೇಡ್ಕರ್‌ ನಮಗೆ  ಅವರ ವಿಚಾರದಿಂದಲ್ಲಅವರ ಜೀವನ ರೀತಿಯಿಂದಲೇ ಕಲಿಸಿದ್ದಾರೆ. ಸ್ವಾಭಿಮಾನದ ಬದುಕಿಗೆ ಜಯಿಸಿ ಕೊಟ್ಟಿದ್ದಾರೆ. ಇದನ್ನು ನಾವು ಜತನದಿಂದ ಕಾಯ್ದುಕೊಳ್ಳಬೇಕು. ಧರ್ಮ ಎಂಬುದು ದಾರಿಯೇ ಹೊರತು ಗುರಿಯಲ್ಲ. ಇದೊಂದು ನೋವು ಮತ್ತು ಬಿಕ್ಕಟ್ಟಿಗೆ ಉಪಶಮನ.ದೈವ ಎಂಬುದೊಂದು ಪರಿಕಲ್ಪನೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.  

ಪತ್ರಕರ್ತ ಕೆ.ವೆಂಕಟೇಶ್‌ ಮಾತನಾಡಿ, 1930ರಲ್ಲಿ ಬ್ರಿಟಿಷ್‌ ಸೈನಿಕರ ಸಂಖ್ಯೆ ಕೇವಲ 55 ರಿಂದ 60 ಸಾವಿರ. ಆಗ ಭಾರತದ ಜನಸಂಖ್ಯೆ 35 ಕೋಟಿ. ಇಷ್ಟೊಂದು ಕಡಿಮೆ  ಇದ್ದ  ಫರಂಗಿಗಳು  ಅಗಾಧ ಜನರನ್ನು ನಿಯಂತ್ರಿಸಲು ವೇದಾಂತವನ್ನು ರೆಜಿಮೆಂಟ್‌ ನಂತೆ ಬಳಸಿದರು. ಮ್ಯಾಕ್ಸ್‌ ಮುಲ್ಲರ್‌ ಇಡೀ ಜೀವನವನ್ನು ಮುಡಿಪಾಗಿ ಇಟ್ಟು  ಪವಿತ್ರ  ಗ್ರಂಥಗಳ 50 ಸಂಪುಟವನ್ನು  ಹೊರ ತಂದ. ಈ ಕೃತಿಗಳು ಹೇಳುವುದೇನೆಂದರೆ  ಹಿಂದಿನ ಜನ್ಮದ ಕರ್ಮ ಫಲವೇ ಈ ಜೀವನ, ಜೀವನವೇ ಬಂಧನ,  ತರ್ಕದಿಂದ ಸತ್ಯದ ಹುಡುಕಾಟ ಸಾಧ್ಯವಿಲ್ಲ ಎನ್ನುತ್ತವೆ. ಇದರ ಆಧಾರದಿಂದ ನಾವು ನಿಮ್ಮನ್ನು ಉದ್ಧರಿಸಲು, ಕತ್ತಲಲ್ಲಿರುವವರಿಗೆ ಬೆಳಕ ನೀಡಲು ಬಂದಿದ್ದೇವೆ ಎಂದು ಬ್ರಿಟಿಷರು ನಂಬಿಸಿದರು. ಈಗ ಮೌಢ್ಯ, ಮತ, ಆಹಾರ ಎಂಬ ವಿಷಯಗಳು ರೆಜಿಮೆಂಟ್‌ನಂತೆ ಬಳಕೆಯಾಗುತ್ತಿವೆ. ಎಲ್ಲರಂಗಗಳಲ್ಲೂ ಪ್ರಜಾಪ್ರಭುತ್ವ ಶಿಥಿಲವಾಗುತ್ತಿದೆ.  ಇದನ್ನು ಮೇಲೆತ್ತಲು ಅಂಬೇಡ್ಕರ್‌ ಶ್ರಮಿಸಿದರು. ದಲಿತರ ಜೀವನ, ಸ್ವಾಭಿಮಾನಕ್ಕಾಗಿ ಅವರು ನಡೆಸಿದ ಹೋರಾಟಕ್ಕೆ ಎಣೆಯೇ ಇಲ್ಲ ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version