ದೊಡ್ಡಬಳ್ಳಾಪುರ: ತಾಲೂಕಿನ ಚಿಗರೇನಹಳ್ಳಿ ಬಳಿಯಿರುವ ಬಿಬಿಎಂಪಿ ಕಸ ತ್ಯಾಜ್ಯ ವಿಲೇವಾರಿ ಎಂಎಸ್ಜಿಪಿ ಘಟಕ ಮುಚ್ಚುವಂತೆ ನಡೆಯುತ್ತಿರುವ ಹೋರಾಟ 10ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಆಗಮಿಸಿ ಬೆಂಬಲ ಸೂಚಿಸಿದರು.
ಎಂಎಸ್ ಜಿಪಿ ಘಟಕದಲ್ಲಿ ಕಸ ವೈಜ್ಞಾನಿಕ ವಿಲೇವಾರಿ ಆಗದ ಕಾರಣ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಷದ ನೀರು, ಗಾಳಿ ಹರಡಿದ್ದು, ಅಂತರ್ಜಲ ಸಂಪೂರ್ಣ ಹಾಳಾಗಿದ್ದು ಕೂಡಲೇ ಬಿಬಿಎಂಪಿ ಕಸ ತ್ಯಾಜ್ಯ ವಿಲೇವಾರಿ ಎಂಎಸ್ ಜಿಪಿ ಘಟಕವನ್ನು ಮುಚ್ಚುವಂತೆ ಆಗ್ರಹಿಸಿ ನವ ಬೆಂಗಳೂರು ಹೋರಾಟ ಸಮಿತಿ ಮತ್ತು ನಾಲ್ಕು ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ದಿನೇ ದಿನೇ ಕಾವೇರುತ್ತಿದೆ. 10ನೇ ದಿನದ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಹಾಗೂ ನೆಲಮಂಗಲ ಸೋಂಪುರ ಹೋಬಳಿ ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕಸದ ಲಾರಿ ವಶಕ್ಕೆ: ಕುಣಿಗಲ್ ಮೂಲದ ಇಂಡೋ ಸ್ಪಾನಿಷ್ ಕಂಪನಿಗೆ ಸೇರಿದ ಕೈಗಾರಿಕಾ ತ್ಯಾಜ್ಯವನ್ನು ಎಂಎಸ್ಜಿಪಿ ಘಟಕಕ್ಕೆ ತಂದು ಸುರಿಯಲು ಬಂದಿದ್ದ ವಾಹನಕ್ಕೆ ಪ್ರತಿಭಟನಾಕಾರರು ತಡೆದು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲು ಮಾಡಿದ್ದಾರೆ.
ಎಂಎಸ್ ಪಿ ಘಟಕದ ಕಳ್ಳಾಟ ಬಯಲು: ಇಲ್ಲಿನ ಕಸ ವಿಲೇವಾರಿ ಘಟಕಕ್ಕೆ ಕೇವಲ ಬೆಂಗಳೂರಿನ ಹಸಿ ಕಸ ಮತ್ತು ಒಣ ಕಸವನ್ನು ಮಾತ್ರ ಇಲ್ಲಿ ವಿಲೇವಾರಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಕೈಗಾರಿಕಾ ತ್ಯಾಜ್ಯ, ಮೆಡಿಕಲ್ ತ್ಯಾಜ್ಯವನ್ನು ಇಲ್ಲಿ ವಿಲೇವಾರಿ ಮಾಡಲು ಅವಕಾಶ ನೀಡಿಲ್ಲ ಎಂದು ಸ್ವತಃ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ತಿಳಿಸಿದ್ದರು. ಆದರೆ ಇಂದು ಬೆಂಗಳೂರು ಅಲ್ಲ ಕುಣಿಗಲ್ ಮೂಲದ ಇಂಡೋ ಸ್ಪಾನಿಷ್ ಎಂಬ ಖಾಸಗಿ ಕಾರ್ಖಾನೆಯ ತ್ಯಾಜ್ಯವನ್ನು ಸುರಿಯಲು ಇಲ್ಲಿ ಬಂದಿದ್ದ ಲಾರಿಯನ್ನು ತಡೆದು
ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಇದರಿಂದ ಎಂಎಸ್ಜಿಪಿ ಘಟಕಕ್ಕೆ ಬರುವ ಯಾವೆಲ್ಲಾ ವಿಷಕಾರಿ ತ್ಯಾಜ್ಯ ಬರುತ್ತಿದೆ ಎಂಬುದು ಸಾಬೀತಾಗಿದೆ. ಇದರ ಮಾಲೀಕರು ಯಾವುದೇ ನೀತಿ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಶೀಘ್ರವಾಗಿ ಎಂಎಸ್ಜಿಪಿ ಘಟಕವನ್ನು ಮುಚ್ಚಿಸಿ ಇದರ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರಥಿ ಸತ್ಯ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು
ನೆಲಮಂಗಲದ ತಾಲೂಕು ಬಿಜೆಪಿ ಮುಖಂಡ ಜಗದೀಶ್ ಚೌಧರಿ ಮಾತನಾಡಿ ರೈತರ ಪರ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ. ವಿದೇಶಗಳಲ್ಲಿ ಕಸದಿಂದ ರಸ ಎಂಬಂತೆ ಪರಿಣಾಮಕಾರಿಯಾಗಿ ಸೂಕ್ತವಾಗಿ ವಿಲೇವಾರಿ ಬಹುಪಯೋಗಿಯಾಗಿ ಬಳಸುತ್ತಿದ್ದಾರೆ. ಇಲ್ಲಿ ಮಾತ್ರ ಕಸದಿಂದ ವಿಷವನ್ನು ಬಿಟ್ಟು ರೈತರ ಬದುಕನ್ನು ಹಾಳು ಮಾಡಲಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ 20 ವರ್ಷಗಳಲ್ಲಿ ಇಲ್ಲಿ ಜನರೇ ವಾಸಿಸದ ಪ್ರದೇಶವಾಗಿ ಮಾರ್ಪಡುತ್ತದೆ ಎಂದು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ವಕೀಲ ಜಗದೀಶ್ ಮಾತನಾಡಿ ಇಲ್ಲಿನ ಪ್ರದೇಶದ ಈಗಾಗಲೇ ಸುಮಾರು 20 ವರ್ಷ ಹಾಳಾಗುವಷ್ಟು ಸಂಪೂರ್ಣ ಧಕ್ಕೆಯಾಗಿದೆ. ಇಲ್ಲಿನ ಬೆಳೆಗಳನ್ನು ಕೂಡ ನೋಡಿದ್ದೇನೆ. ಎಲ್ಲವೂ ಒಣಗಿ ನಿಂತಿವೆ. ಕಾಲುವೆ, ಕುಂಟೆಗಳಲ್ಲಿನ ನೀರು ಯಾವ ಜಾನುವಾರುಗಳು ಕೂಡ ಕುಡಿಯಲು ಯೋಗ್ಯವಾಗಿಲ್ಲ. ರೈತರಿಗೂ ಇಲ್ಲಿನ ನೀರಿನಿಂದ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವಾಗಿ ಬಿಬಿಎಂಪಿ ಕಸದ ಘಟಕವನ್ನು ಮುಚ್ಚಲೇಬೇಕು ಎಂದು ಆಗ್ರಹಿಸಿದರು. ಕಾನೂನು ಹೋರಾಟಕ್ಕೂ ಸಹಕರಿಸುತ್ತೇನೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….