ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗೇರನಹಳ್ಳಿಯಲ್ಲಿನ ಎಂಎಸ್ಜಿಪಿ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತಂದು ಸುರಿಯುತ್ತಿರುವುದರ ವಿರುದ್ಧ ಧರಣಿ ನಡೆಸುತ್ತಿರುವ ಮುಖಂಡತ್ವ ವಹಿಸಿರುವ ನವ ಬೆಂಗಳೂರು ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಯ್ಯ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ‘ಧರಣಿ ಹಿಂದಕ್ಕೆ ಪಡೆಯುವಂತೆ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದ್ದು ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಆರು ದಿನಗಳಿಂದ ಕಸ ವೇಲೇವಾರಿ ಘಟಕದ ಒಳಗೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಬರುವ ಯಾವುದೇ ಲಾರಿಗಳು ಹೋಗದಂತೆ ಕಸ ವಿಲೇವಾರಿ ಘಟಕದ ಸುತ್ತಲಿನ ಗ್ರಾಮಸ್ಥರು ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿಯನ್ನು ನಿಲ್ಲಿಸುವಂತೆ ಅಪರಿಚಿತ ವ್ಯಕ್ತಿಗಳು ಮಂಗಳವಾರ ರಾತ್ರಿ ಕಾರಿನಲ್ಲಿ ಬಂದು ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಈ ಹಿನ್ನೆಲೆ ಸತ್ಯಪ್ರಕಾಶ್, ಸಿದ್ದಲಿಂಗಯ್ಯ ಅವರಿಗೆ ಭದ್ರತೆ ನೀಡಬೇಕು ಎಂದು ನವ ಬೆಂಗಳೂರು ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಪ್ರದೀಪ್ ತಿಳಿಸಿದ್ದಾರೆ.
ಎಂಎಸ್ ಜಿಪಿ ಕಸ ವಿಲೇವಾರಿ ಘಟಕದಿಂದ ಹೊರಬರುತ್ತಿರುವ ಕಲುಷಿತ ನೀರು ಮಧುಗಿರಿ, ಕೊರಟಗೆರೆಯವರೆಗೂ ಹರಿದು ಹೋಗಿ ಕೆರೆಗಳನ್ನು ಸೇರುತ್ತಿರುವುದರಿಂದ ಕಸ ವಿಲೇವಾರಿ ಘಟಕವನ್ನು ಬಂದ್ ಮಾಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಕೊರಟಗೆರೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಮುಖಂಡರಾದ ಕೆಂಪಣ್ಣ, ವೆಂಕಟಪ್ಪ, ಮಂಜುನಾಥ್, ರಾಜಣ್ಣ ಸೇರಿದಂತೆ ಹಲವಾರು ಮುಖಂಡರು ಗುರುವಾರ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಧರಣಿ ನಿರತ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ತಿಳಿಸಿದ್ದಾರೆ.
ನೀರಿನ ಟ್ಯಾಂಕರ್ ಲಾರಿಗಳು ಕಸ ಘಟಕ ಪ್ರವೇಶ: ಎಂಎಸ್ ಜಿಪಿ ಕಸ ವಿಲೇವಾರಿ ಘಟಕದ ಒಳಗೆ ಹೋಗಲು ಸರ್ಕಾರಿ ಅಧಿಕಾರಿಗಳ ವಾಹನಗಳ ಹೊರತು ಯಾವುದೇ ವಾಹನಗಳನ್ನು ಆರು ದಿನಗಳಿಂದ ಅವಕಾಶ ನೀಡಿರಲಿಲ್ಲ. ಆದರೆ ಬುಧವಾರ ಪೊಲೀಸರು ಧರಣಿ ನಿರತರೊಂದಿಗೆ ಸುಧೀರ್ಘ ಮಾತುಕತೆಯ ನಂತರ ನೀರು ತುಂಬಿದ ಲಾರಿ ಸೇರಿದಂತೆ ಕಸ ವಿಲೇವಾರಿ ಘಟಕದಲ್ಲಿ ಸ್ವಚ್ಛಗೊಳಿಸಲು ಅವಶ್ಯಕ ಇರುವ ವಾಹನಗಳನ್ನು ಒಳ ಹೋಗಲು ಅವಕಾಶ ನೀಡಲಾಗಿದೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….