ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್ಜಿಪಿ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತಂದು ಸುರಿಯುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ನಡೆಸುತ್ತಿರುವ ಧರಣಿ ಸ್ಥಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಭೇಟಿ ನೀಡಿ ನಡೆಸಿದ ಮಾತುಕತೆ ವಿಫಲವಾಗಿದೆ. ಕಸ ತಂದು ಇಲ್ಲಿಗೆ ರಾಶಿ ಹಾಕುತ್ತಿರುವುದನ್ನು ನಿಲ್ಲಿಸುವವರೆಗೂ ಧರಣಿಯನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಹೀಗಾಗಿ ಧರಣಿ ಮುಂದುವರೆದಿದೆ.
ಕಸ ವಿಲೇವಾರಿ ಘಟಕದ ಸುತ್ತಲು ಉಂಟಾಗಿರುವ ಪರಿಸರ ಹಾನಿಯ ಕುರಿತು ವೀಕ್ಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಸವಿಚ ಎಂ.ಟಿ.ಬಿ.ನಾಗರಾಜ್, ಸೂಕ್ತ ನಿರ್ವಹಣೆ ಕೊರತೆ ಹಾಗೂ ಮಳೆ ಹೆಚ್ಚಾಗಿದ್ದರಿಂದ ಸಮಸ್ಯೆ ಉಂಟಾಗಿದೆ. ಸೂಕ್ತ ನಿರ್ವಹಣೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವ ಬಗ್ಗೆ ಬಿಬಿಎಂಪಿ ಹಾಗೂ ಎಂಎಸ್ಜಿಪಿ ಕಸ ವಿಲೇವಾರಿ ಘಟಕದವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಲುಷಿತ ನೀರು ಹೊರ ಹೋಗದಂತೆ ಹಾಗೂ ಕಸದಿಂದ ವಾಸನೆ ಹೊರ ಹೋಗದಂತೆ ತುರ್ತು ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಲಿದ್ದಾರೆ. ಆದರೆ ಏಕಾಏಕಿ ಕಸ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಕಷ್ಟವಾಗಲಿದೆ.ಇಲ್ಲಿನ ಸಮಸ್ಯೆ ಕುರಿತು ಮುಖ್ಯಮಂತ್ರಿಗಳೊಂದಿಗು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತಂತೆ ಚರ್ಚಿಸಲಾಗುವುದು. ಧರಣಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಕೇಂದ್ರ ವಲಯ ಐಜಿಪಿ ಚಂದ್ರಶೇಖರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ, ತಹಶೀಲ್ದಾರ್ ಟಿ.ಎಸ್ ಶಿವರಾಜು, ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ಸರ್ಫರಾಜ್ ಇದ್ದರು.
ಸಚಿವರ ಮಾತಿಗೆ ಕಿಮ್ಮತ್ತು ನೀಡದ ಧರಣಿನಿತರು: ಧರಣಿ ಆರಂಭಿಸಿದಾಗಿನಿಂದಲು ನಮ್ಮ ಏಕೈಕ ಒತ್ತಾಯ ಕಸದ ಲಾರಿಗಳು ಇಲ್ಲಿಗೆ ಬರುವುದನ್ನು ನಿಲ್ಲಿಸಬೇಕು ಎನ್ನುವುದಾಗಿದೆ. ನಮ್ಮ ಈ ಒತ್ತಾಯಕ್ಕೆ ಒಪ್ಪುವ ಅಧಿಕಾರಿಗಳು, ಸಚಿವರು ಮಾತ್ರ ಧರಣಿ ಸ್ಥಳಕ್ಕೆ ಬಂದು ಮಾತುಕತೆ ನಡೆಸಬಹುದಾಗಿದೆಯೇ ಹೊರತು ವಿನಾಕಾರಣ ಭೇಟಿ ನೀಡಿ ಮೇಲಾಧಿಕಾರಿಗಳನ್ನು ಮೆಚ್ಚಿಸುವ ಕೆಲಸ ಮಾಡುವವರು ಸಮಸಯ ವ್ಯರ್ಥ ಮಾಡಲು ಇಲ್ಲಿಗೆ ಬರುವ ಅಗತ್ಯವೇ ಇಲ್ಲ ಎಂದು ಧರಣಿ ನಿರತ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಭಕ್ತರಹಳ್ಳಿ, ಸಾಸಲು, ಆರೂಢಿ, ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಬಿಬಿಎಂಪಿ ಕಸ ಇಲ್ಲಿಗೆ ಬರುವುದನ್ನು ನಿಲ್ಲಿಸಲು ಹೋರಾಟ ನಡೆಸಲಾಗುವುದು ಎಂದು ಮತದಾರರಿಗೆ ಭರವಸೆ ನೀಡಿದ್ದೆವೆ. ಹೀಗಾಗಿ ಈಗ ಕಸ ಇಲ್ಲಿಗೆ ಬರುವುದನ್ನು ನಿಲ್ಲುವುದೇ ನಮ್ಮ ಪ್ರಮುಖ ಆಗ್ರಹವಾಗಿದೆ. ಕಸ ತಂದು ಇಲ್ಲಿಗೆ ಹಾಕುವುದನ್ನು ನಿಲ್ಲಿಸುವ ನಮ್ಮ ಬೇಡಿ ಈಡೇರದಿದ್ದರೆ ಡಿ.10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸುವ ಕುರಿತಂತೆ ಒಂದೆರಡು ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಧರಣಿಯಲ್ಲಿ ಭಾಗವಹಿಸಿರುವ ಭಕ್ತರಹಳ್ಳಿ, ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.
ರಾಗಿ ಹೊಲಕ್ಕೆ ಹರಿದ ಕೊಳಚೆ ನೀರು: ಚಿಗರೇನಹಳ್ಳಿಯ ಎಂಎಸ್ಜಿಪಿ ಕಸ ವಿಲೇವಾರಿ ಘಟಕದಿಂದ ಹೊರ ಬಂದು ಚಕ್ಡ್ಯಾಮಿನಲ್ಲಿ ಶೇಖರಣೆಯಾಗಿದ್ದ ರಾಸಾಯನಿಕ ಯುಕ್ತ ಕಲುಷಿತ ಕೊಳಚೆ ನೀರಿನ ಕುರಿತಂತೆ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ್ದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳು ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ಮಾಲೀಕರನ್ನು ತೀವ್ರ ತರಾಟೆ ತೆಗೆದುಕೊಂಡಿದ್ದರು. ಇದೇ ಚಕ್ಡ್ಯಾಮಿನಿಂದ ಕಲುಷಿತ ನೀರಿನ ಮಾದರಿಯನ್ನು ಸಂಗ್ರಹ ಮಾಡಿಕೊಂಡಿದ್ದರು. ಅಲ್ಲದೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಬಿಬಿಎಂಪಿ ಹಿರಿಯ ಅಧಿಕಾರಿಗಳು ಭೇಟಿ ನೀಡುವ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಚಕ್ಡ್ಯಾಮಿನಿಂದ ನೀರು ಹೊರಗೆ ಸಾಗಿಸುವ ಅತುರದಲ್ಲಿ ಅಕ್ಕಪಕ್ಕದಲ್ಲಿನ ರೈತರ ರಾಗಿ ಹೊಲಗಳಿಗೆ ಜನರೇಟರ್ ಮೂಲಕ ಹರಿದು ಬಿಟ್ಟಿದ್ದಾರೆ. ಇದರಿಂದ ಮುಡ್ಲುಕಾಳೇನಹಳ್ಳಿ ಗ್ರಾಮರ ರೈತ ಮಹಿಳೆ ಹನುಮಕ್ಕ ಅವರ ರಾಗಿ ಹೊಲದ ತುಂಬಾ ಕಲುಷಿತ ನೀರು ತುಂಬಿಕೊಂಡಿದೆ. ಇದರಿಂದಾಗಿ ಕೊಯ್ಲಿಗೆ ಬಂದಿದ್ದ ರಾಗಿ ಹೊಲ ಹಾಳಗಾಗಿರುವ ಕುರಿತಂತೆ ಹನುಮಕ್ಕ ಅವರು ಕಂದಾಯ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.
ಜಿಲ್ಲಾಧಿಕಾರಿ ಆದೇಶಕ್ಕೆ ಆಕ್ರೋಶ: ರಾಜ್ಯದಲ್ಲಿ ಒಮೈಕ್ರೋನ್ ಹಾವಳಿಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆಗಳನ್ನು ನೀಡಿದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಮಾತ್ರ ರಾಜ್ಯ ಸರ್ಕಾರ ನೀಡಿರುವ ಸೂಚನೆಗಳಷ್ಟೇ ಅಲ್ಲದೆ ಪ್ರತಿಭಟನೆ,ಧರಣಿ ಸೇರಿದಂತೆ ಎರಡು ಗಂಟೆಗಳಿಗು ಹೆಚ್ಚಿನ ಸಮಯ ಗುಂಪು ಸೇರುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಬಿಬಿಎಂಪಿ ಕಸ ಕಂಟಕದ ವಿರುದ್ಧ ರೈತರು ನಡೆಸುತ್ತಿರುವ ಧರಣಿಯನ್ನು ಹತ್ತಿಕ್ಕುವ ಸಲುವಾಗಿಯೇ ಈ ಆದೇಶವನ್ನು ಹೊರಡಿಸಿದ್ದಾರೆ. ಧರಣಿ ನಿರತ ರೈತರಿಗೆ ಉತ್ತರ ನೀಡಲಾಗದೆ ಅಡ್ಡದಾರಿಯ ಮೂಲಕ ಧರಣಿಯನ್ನು ನಿಲ್ಲಿಸಲು ಹೊರಡಿಸಲಾಗಿರುವ ಆದೇಶವನ್ನು ಉಲ್ಲಂಘಿಸಿಯೇ ಧರಣಿ ನಡೆಸಲಾಗುವುದು.
ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಲಾಕ್ಡೌನ್ ಜಾರಿ ಇದ್ದಾಗಿನಿಂದಲು ದೆಹಲಿಯ ಗಡಿ ಸುತ್ತ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಇಂದಿಗೂ ಧರಣಿ ನಡೆಸುತ್ತಿದ್ದಾರೆ. ಅವರಿಗೆ ಅನ್ವಯಸದ ನಿಯಮ ನಮಗೂ ಅನ್ವಯಿಸುವುದಿಲ್ಲ. ನಾವೆಲ್ಲರೂ ಅಂಬೇಡ್ಕರ್ ಅವರ ಸಂವಿಧಾನದ ಮೂಲಕ ಜಾರಿಗೆ ಬಂದಿರುವ ಕಾನೂನುಗಳ ಅಡಿಯಲ್ಲೇ ಬದುಕುತ್ತಿರುವುದು, ಪ್ರತಿಭಟನೆ ನಡೆಸುತ್ತಿರುವುದು ಎಂದು ಧರಣಿ ನಿತರು ಮುಖಂಡರು ತಿಳಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….