ದೊಡ್ಡಬಳ್ಳಾಪುರ: ವಿಜ್ಞಾನದಿಂದ ಇಂದು ಬದುಕು ಅರಳುವ ಬದಲು ನರಳುತ್ತಿದ್ದು, ಎಷ್ಟೇ ಸೌಲಭ್ಯಗಳಿದ್ದರೂ ಸಹ ಮನಶ್ಯಾಂತಿ ಇಲ್ಲದಂತಾಗಿದೆ. ಈ ದಿಸೆಯಲ್ಲಿ ಧ್ಯಾನ ಹಾಗೂ ದೇವತಾ ಕಾರ್ಯಗಳು ನಮ್ಮನ್ನು ನಾವು ಅರ್ಥ ಮಾಡಿಕೊಂಡು ನೆಮ್ಮದಿ ಕಾಣಲು ಸಹಕಾರಿಯಾಗುತ್ತವೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ತಿಳಿಸಿದರು.
ತಾಲೂಕಿನ ನೇರಳೆಘಟ್ಟ ಗ್ರಾಮದಲ್ಲಿ ಆಂಜನೇಯಸ್ವಾಮಿ ಹಾಗೂ ಗ್ರಾಮದೇವತೆ ಮಹೇಶ್ವರಿ ಅಮ್ಮನವರ ನೂತನ ದೇವಾಲಯ ಹಾಗೂ ಬಿಂಬ ಪ್ರತಿಷ್ಟಾಪನಾ ಮಹೋತ್ಸವದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ವಾಹನಗಳು, ಸಂಪರ್ಕ ಕ್ರಾಂತಿ ಮೊದಲಾಗಿ ಹಿಂದೆ ಚಕ್ರವರ್ತಿಗಳೂ ಅನುಭವಿಸದೇ ಇರುವ ಸೌಲಭ್ಯಗಳನ್ನು ಇಂದು ಜನಸಾಮಾನ್ಯರು ಅನುಭವಿಸುವಂತೆ ಮಾಡಿರುವುದು ವಿಜ್ಞಾನ ಮತ್ತು ತಂತ್ರಜ್ಞಾನದ ಹೆಗ್ಗಳಿಕೆಯಾಗಿದೆ. ಆದರೆ ಮನಸ್ಸಿನಲ್ಲಿ ದುಃಖ, ದುಗುಡ, ದುಮ್ಮಾನಗಳು ಹೆಚ್ಚಾಗುತ್ತಿವೆ. 110 ವರ್ಷಗಳ ಹಿಂದೆಯೇ ಖ್ಯಾತ ವಿಜ್ಞಾನ ಐನ್ಸ್‍ಟಿನ್ ವಿಜ್ಞಾನ ಮುಂದೆ ಮಾನವೀಯ ಸಂಬಂಧಗಳು ಕಸಿಯುವ ಹಾಗೂ ಸಮಾಜದಲ್ಲಿ ಅಶಾಂತಿ ನೆಲೆಸಲು ಬಳಕೆಯಾಗುವ ಕುರಿತು ಆತಂಕ ವ್ಯಕ್ತಪಡಿಸಿದ್ದನು. ಆಕಾಶಕ್ಕೆ ಯಾನ ಮಾಡುವ ನಾವು ಮನೆಯ ಒಳಗೆ ಕೆಲ ಕಾಲ ನಿರ್ಮೂಲವಾಗಿರಲು ಆಗುತ್ತಿಲ್ಲ. ಈ ದಿಸೆಯಲ್ಲಿ ಹಿರಿಯರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯಬೇಕಿದೆ. ಎಲ್ಲೆಡೆ ಭಗವಂತ ಇದ್ದಾನೆ ಎನ್ನುವುದಿದ್ದರೂ ದೇವಾಲಯಗಳನ್ನು ನಿರ್ಮಿಸುವುದು ದೇವರನ್ನು ಮರೆಯಬಾರದು ಎನ್ನುವ ಕಾರಣದಿಂದಾಗಿ. ಆದ್ಯಾತ್ಮಿಕ ನೆಲೆಗಟ್ಟಿನಲ್ಲಿ ನಿರ್ಮಿತವಾದ ಬದುಕು ಸುಖ ಸಂತೋಷ ಕಾಣುತ್ತದೆ.
ಮಕ್ಕಳಿಗೆ ಉತ್ತಮ ಸಂಸ್ಕಾರ, ಧ್ಯಾನ ಹಾಗೂ ಧಾರ್ಮಿಕ ಚಿಂತನೆಗಳನ್ನು ಕಲಿಸಬೇಕಿದೆ. ಇಂದು ನಿರ್ಮಿಸಿರುವ ಆಂಜನೇಯ ಸ್ವಾಮಿಯ ಸ್ವಾಮಿ ನಿಷ್ಟೆ, ಭಕ್ತಿ ಜ್ಞಾನಗಳನ್ನು ಮಾದರಿಯಾಗಿಸಿಕೊಳ್ಳಬೇಕಿದೆ. ತಾಯಿ ಹೃದಯವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ದೇವಾಲಯಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗಲಿದ್ದು, ಊರಿಗೊಂದು ದೇವಾಲಯಗಳ ಅಗತ್ಯವಿದೆ ಎಂದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದಸ್ವಾಮೀಜಿ, ಮುಖಂಡರಾದ ಬಿ.ಮುನೇಗೌಡ, ಎನ್.ಗೋಪಾಲಯ್ಯ, ಚಿಕ್ಕರಾಮಕೃಷ್ಣಪ್ಪ, ಡಾ.ಆಂಜಿನಪ್ಪ, ನರಸಿಂಹಯ್ಯ, ಎಚ್.ಅಪ್ಪಯ್ಯಣ್ಣ, ಆರ್.ಗೋವಿಂದರಾಜು, ರವಿ, ದೇವಾಲಯಗಳ ಜೀರ್ಣೋದ್ದಾರ ಸಮಿತಿಯ ಎನ್.ಸಿ.ಮುನಿರಾಜು, ಚನ್ನಕೃಷ್ಣಯ್ಯ, ಎನ್.ಸಿ.ರಮೇಶ್, ಹನುಮಂತೇಗೌಡ ಮೊದಲಾದ ಗಣ್ಯರು ಭಾಗವಹಿಸಿದ್ದರು.
ಪ್ರತಿಷ್ಟಾಪನಾ ಮಹೋತ್ಸವದ ಅಂಗವಾಗಿ, ವಿಶೇಷ ಹೋಮ, ಪೂಜಾ ಕಾರ್ಯಕ್ರಮಗಳು ನಡೆದವು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……