![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ಬೆಂ.ಗ್ರಾ.ಜಿಲ್ಲೆ: ಕಟ್ಟಡ ಹಾಗೂ ಇತರೆ ಕಾಮಗಾರಿಗಳಿಂದ ಶೇಕಡಾ ಒಂದರಷ್ಟು ಸುಂಕ ಸಂಗ್ರಹಿಸಿ ಕಾರ್ಮಿಕ ಕಲ್ಯಾಣ ಮಂಡಳಿಗೆ ವರ್ಗಾವಣೆ ಮಾಡುವುದರಿಂದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ, ಗಾಯಗೊಳ್ಳುವಿಕೆ, ಅಕಾಲಿಕ ಮರಣ ಮುಂತಾದ ಸಮಸ್ಯೆಗೆ ಒಳಪಟ್ಟ ಕಾರ್ಮಿಕ ಕುಟುಂಬಗಳಿಗೆ ಈ ಹಣ ಉಪಯೋಗವಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಸುಂಕ ಕಾಯ್ದೆ 1996 ಹಾಗೂ ನಿಯಮಗಳು 1998ರಡಿ “ಸುಂಕ ಸಂಗ್ರಹಣಾ ಅಭಿಯಾನ”ದ ಅಂಗವಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ “ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವ” ಕುರಿತು ಆಂತರಿಕ ದೂರ ಸಮಿತಿ ರಚಿಸುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಸಂಗ್ರಹಿಸಿದ ಸುಂಕವನ್ನು ಮೂವತ್ತು ದಿನದ ಒಳಗಾಗಿ ಕಾರ್ಮಿಕ ಮಂಡಳಿ ಜಮೆಮಾಡಬೇಕು ಹಾಗೂ ಕಾರ್ಮಿಕರಿಗೆ ಈ ಕುರಿತು ಅರಿವು ಮೂಡಿಸಬೇಕೆಂದರು.
ಇ-ಶ್ರಮ್(ಅಸಂಘಟಿತ ವಲಯದ ಕಾರ್ಮಿಕರ ಸಮಗ್ರ ರಾಷ್ಟೀಯ ಡೇಟಾ ಬೇಸ್) ಪೆÇೀರ್ಟಲ್‍ನಲ್ಲಿ ಎಲ್ಲಾ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ. ಕೃಷಿ ಕಾರ್ಮಿಕರು, ನೇಕಾರರು, ಕ್ಷೌರಿಕರು, ಟೈಲರ್‍ಗಳು, ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು ಹಾಗೂ ಇತರೆ ಕಾರ್ಮಿಕ ವರ್ಗದವರು ನೊಂದಾಯಿಸಿಕೊಳ್ಳುವುದರ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇ-ಶ್ರಮ್ ಪೆÇೀರ್ಟಲ್‍ನಲ್ಲಿ ನೊಂದಾಯಿಸಿದ ಅಸಂಘಟಿತ ವಲಯದ ಕಾರ್ಮಿಕರಿಗೆ ಆಕಸ್ಮಿಕ ಸಾವು ಮತ್ತು ಪೂರ್ಣ ಅಂಗವೈಕಲ್ಯಕ್ಕೆ ರೂ. 2 ಲಕ್ಷ ಮತ್ತು ಭಾಗಶಃ ಅಂಗವೈಕಲ್ಯಕ್ಕೆ ರೂ. 1 ಲಕ್ಷ ಸಹಾಯಧನ ನೀಡಲಾಗುವುದು. ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಲು ಸಹಾಯ ಮಾಡುವುದರ ಜೊತೆಗೆ ಅವರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಿದರು.
ಎಲ್ಲಾ ಕಚೇರಿಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸಿ, ಮಹಿಳೆಯರಿಗೆ ಲೈಂಗಿಕ ಶೋಷಣೆ, ದೌರ್ಜನ್ಯ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುವ ವ್ಯಕ್ತಿ ಅಥವಾ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಬೇಕು ಹಾಗೂ ಆರು ತಿಂಗಳ ಒಳಗಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕೆಂದು ಹೇಳಿದರು.
ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಜಿಲ್ಲೆಯಲ್ಲಿ, ಈಗಾಗಲೇ ಕಾನೂನು ಅರಿವು-ನೆರವು ಕಾರ್ಯಕ್ರಮಗಳು, ಬೀದಿ ನಾಟಕಗಳು, ಆಟೋ ಪ್ರಚಾರ, ಗೋಡೆ ಬರಹಗಳು, ಮೊದಲಾದ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದ್ದು, ಬಾಲ್ಯಾವಸ್ಥೆ, ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ(ನಿಷೇಧ ಮತ್ತು ನಿಯಂತ್ರಣ)ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರಡಿ ನೇಮಕಗೊಂಡ ಕಲಂ 16 ಮತ್ತು 17 ರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಲು ನಿರಂತರವಾಗಿ ಕ್ರಮವಹಿಸಿ ಎಂದರಲ್ಲದೆ, ಮುಖ್ಯವಾಗಿ ಸರ್ಕಾರಿ ನೌಕರರು ತಮ್ಮ ಮನೆ ಕೆಲಸಗಳಿಗೆ ಯಾವುದೇ ಮಕ್ಕಳನ್ನು ಸಹ ತೊಡಗಿಸಕೊಳ್ಳಬಾರದೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಅವರು ಮಾತನಾಡಿ, ಯಾವುದೇ ರೀತಿಯ ನಿರ್ಮಾಣ, ಸಮುದಾಯ ಹಾಗೂ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ರಚನೆ ಮಾಡಲಾಗಿದ್ದು, ಇದರಿಂದ ಕಾರ್ಮಿಕರ ಮಕ್ಕಳು ಹಾಗೂ ಕಾರ್ಮಿಕ ವರ್ಗಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ, ಕಾರ್ಮಿಕರ ಹಿತರಕ್ಷಣೆಗಾಗಿ ಕಾರ್ಮಿಕ ನಿಯಮಗಳನ್ನು ಜಾರಿಗೊಳಿಸಿದೆ. ಪ್ರತಿ ಇಲಾಖೆ, ಅಧಿಕಾರಿ, ನಿರ್ಮಾಣ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ಶೇಕಡಾ ಒಂದರಷ್ಟು ಸುಂಕ ಕಡಿತಗೊಳಿಸಿ ಕಾರ್ಮಿಕ ಕಲ್ಯಾಣ ಮಂಡಳಿಗೆ ಜಮೆಮಾಡಬೇಕು. ಕಾರ್ಮಿಕ ಕಾಯ್ದೆಯಡಿ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ, ಆರು ತಿಂಗಳ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆ ಒಳಗೊಂಡಂತೆ ರಾಜ್ಯದಲ್ಲಿ ಕೋವಿಡ್ ಸಮಯದಲ್ಲಿ, ಬಾಲ್ಯವಿವಾಹದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದು, ಸೂಕ್ತ ಕ್ರಮ ಜರುಗಿಸಲಾಗಿದೆ. ಅನೈತಿಕವಾಗಿ ಮಹಿಳೆ ಹಾಗೂ ಮಕ್ಕಳ ಸಾಗಾಣಿಕೆ ವಿರುದ್ಧ ಅಧಿಕಾರಿಗಳು ಕಾರ್ಯಪ್ರವೃತ್ತಯಾಗಬೇಕು, ನಿಯಮಬಾಹಿರ ಚಟುವಟಿಕೆಗಳಲ್ಲಿ ಮಹಿಳೆ ಹಾಗೂ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ ಅವರು ಮಾತನಾಡಿ ಹಿಂದೆ ಮಹಿಳೆಯರು ನಾಲ್ಕು ಗೋಡೆಗಳ ಮದ್ಯೆ ಇರುತ್ತಿದ್ದರು, ಮದುವೆ ಹಾಗೂ ಮಕ್ಕಳ ಹೆರುವುದಕ್ಕೆ ಮಾತ್ರಕ್ಕೆ ಸೀಮಿತರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರ ಸರಿಸಮನಾಗಿ ವಿದ್ಯಾಭ್ಯಾಸ ಪಡೆದು ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆಗೈದಿರುವುದು ಖುಷಿಯ ವಿಚಾರವಾಗಿದೆ ಎಂದು ತಿಳಿಸಿದರು.
ಯಾವುದೇ ಕಚೇರಿಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಮಾನಸಿಕ ಹಿಂಸೆ, ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲಿ ಈ ಕುರಿತಂತೆ ಮುಕ್ತವಾಗಿ ವಿಚಾರಣೆ ನಡೆಸಿ ದೂರನ್ನು ದಾಖಲಿಸಬೇಕು. ಅಂತಹ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬುವಂತಹ ಕೆಲಸ ಮಾಡಬೇಕೆಂದು ಹೇಳಿದರು.
ಸಹಾಯಕ ಕಾರ್ಮಿಕ ಆಯುಕ್ತ ದೇವರಾಜ್ ಅವರು ಮಾತನಾಡಿ ಎಲ್ಲಾ ಐತಿಹಾಸಿಕ ಕಟ್ಟಡಗಳನ್ನು ಕಾರ್ಮಿಕರು ನಿರ್ಮಾಣ ಮಾಡಿದ್ದಾರೆ. ಆದರೆ ಅವರನ್ನು ಗಣನೆಗೆ ತೆಗೆದುಕೊಂಡು, ಸ್ಮರಿಸಬೇಕು. ಕಾರ್ಮಿಕ ಕಲ್ಯಾಣ ಸುಂಕ ಸರಿಯಾದ ಪ್ರಮಾಣದಲ್ಲಿ ಸಂಗ್ರಹವಾಗುತ್ತಿಲ್ಲ ಎಂದು ಹೇಳಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿ ಹಾಗೂ ಸಂಬಂಧಿಸಿದ ವೆಬ್‍ಸೈಟ್‍ನಲ್ಲಿ ನೋಂದಾಣಿಯಾಗುವ ಫಲಾನುಭವಿಗಳಿಗೆ ವಸತಿ ಸೌಲಭ್ಯ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಮದುವೆ ಸಹಾಯಧನ, ಅಪಘಾತ ಪರಿಹಾರ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಕಾರ್ಮಿಕ ಅದಾಲತ್ ಯಶಸ್ವಿಯಾಗಿ ಕೈಗೊಂಡಿದ್ದು, ಈ ಬಾರಿ ಸುಂಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಬಾಕಿ ಉಳಿದಿರುವ ಸುಂಕವನ್ನು ಪಾವತಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು. ಕಟ್ಟಡ ಕಾರ್ಮಿಕರು ಕನಿಷ್ಟ ವೇತನಕ್ಕೆ ಸಂಬಂಧಪಟ್ಟಂತೆ ಮಾಹಿತಿ ತಿಳಿಯುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜ್.ಎಸ್ ಅವರು ಮಾತನಾಡಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ “ಸಖಿ” ಸೂರಿನಡಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ನೊಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ, ಕಾನೂನು ಸಮಾಲೋಚನೆ, ವೈದ್ಯಕೀಯ ಚಿಕಿತ್ಸೆ, ಪೆÇಲೀಸ್ ನೆರವು ನೀಡಿ ಸಹಾಯ ಹಾಗೂ ಬೆಂಬಲವನ್ನು ನೀಡಲಾಗುವುದು ಹಾಗೂ ಕೌಟುಂಬಿಕ ದೌರ್ಜನ್ಯ ಹಾಗೂ ವರದಕ್ಷಿಣೆ ಕಿರುಕುಳ ತಡೆಗಟ್ಟಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿಕೃಷ್ಣಪ್ಪ, , ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಪ್ಪೇಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಮಾರೇಗೌಡ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಸ್.ಸುಬ್ಬಾರಾವ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….