ದೊಡ್ಡಬಳ್ಳಾಪುರ: ನಗರದ ಖಾಸ್ ಬಾಗ್ ರೈಲ್ವೆ ಅಂಡರ್ ಪಾಸ್ ರಸ್ತೆ ಅವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾದ ಹಿನ್ನಲೆಯಲ್ಲಿ, ರಸ್ತೆ ಗುಂಡಿಗಳನ್ನು ರೆಡಿ ಕಾಂಕ್ರಿಟ್ ಹಾಕಿ ಮುಚ್ಚಲಾಯಿತು.
ಈ ವೇಳೆ ವಾಹನಗಳ ಸಂಚಾರಕ್ಕೆ ಕೆಲ ಕಾಲ ಅಡ್ಡಿಯಾಗಿತ್ತು. ಪೊಲೀಸರು ಖಾಸ್ ಬಾಗ್ ಮೂಲಕ ಸಂಚರಿಸುವ ವಾಹನಗಳನ್ನು, ರಂಗಪ್ಪ ವೃತ್ತ ಹಾಗೂ ರೈಲ್ವೆ ನಿಲ್ದಾಣದ ಎರಡೂ ಕಡೆ ತಡೆ ಹಿಡಿದು ನಿಯಂತ್ರಿಸಿದರು.
ಶಾಸಕ ಟಿ.ವೆಂಕಟರಮಣಯ್ಯ ಭೇಟಿ: ಗುರುವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಟಿ.ವೆಂಕಟರಮಣಯ್ಯ ಕಾಮಗಾರಿ ವೇಳೆ ಸ್ಥಳದಲ್ಲಿಯೇ ಹಾಜರಿದ್ದು ಪರಿಶೀಲಿಸಿದರು.
ರೈಲ್ವೆ ಇಲಾಖೆಯಿಂದ ರೈಲ್ವೆ ಅಂಡರ್ ಪಾಸ್ ನಿರ್ಮಾಣವಾಗುತ್ತಿರುವುದರಿಂದ ಇಲ್ಲಿ ರಸ್ತೆ ಕಾಮಗಾರಿಗೆ ತೊಡಕಾಗಿದೆ. ಇಂದು ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿ, ಶೀಘ್ರವೇ ರಸ್ತೆ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಪುಟ್ಟಹನುಮಂತರಾಜು ಪ್ರತಿಕ್ರಿಯಿಸಿ, ರಸ್ತೆಗಳ ಹಳ್ಳಗಳನ್ನು ರೆಡಿ ಕಾಂಕ್ರಿಟ್ನಿಂದ ಮುಚ್ಚಲಾಗಿದೆ. ಮಳೆ ನಿಂತ ನಂತರ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ವಿಡಿಯೋ ವೈರಲ್: ಈ ರಸ್ತೆಯ ಅವ್ಯವಸ್ಥೆ ಕುರಿತಂತೆ ನಗರವಾಸಿ ಕೀರ್ತಿ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿದ್ದಲ್ಲದೆ, ತೀವ್ರ ಚರ್ಚೆಗೆ ಕಾರಣವಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……