ಬೆಂ.ಗ್ರಾ.ಜಿಲ್ಲೆ: ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲೆಂದು ಜಾರಿಗೆ ತಂದಿರುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮ ಶಿಷ್ಯವೇತನದ ಸದುಪಯೋಗವನ್ನು ರೈತರ ಮಕ್ಕಳು ಪಡೆದುಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ “2021-22ನೇ ಸಾಲಿನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದ ಅನುಷ್ಠಾನ ಸಂಬಂಧ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಶಿಷ್ಯವೇತನಕ್ಕೆ ರೈತರ ಮಕ್ಕಳು ಅರ್ಹರಾಗಿರುವುದರಿಂದ, ಈ ಶಿಷ್ಯವೇತನ ಯೋಜನೆಯ ಕುರಿತ ಅಗತ್ಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಈ ಯೋಜನೆ ಅನುಕೂಲಕರವಾಗಲಿದೆ ಎಂದು ತಿಳಿಸಿದರು.
ತಂದೆ-ತಾಯಿ ಇಬ್ಬರು ಕೃಷಿ ಜಮೀನಿನ ಒಡೆಯರಾಗಿದ್ದರೆ, ಅಂತಹವರ ಮಕ್ಕಳು ಈ ಯೋಜನೆಯಲ್ಲಿ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗಿರುತ್ತಾರೆ ಎಂದರಲ್ಲದೆ, ಯಾವುದಾದರೊಂದು ಕೋರ್ಸ್ ಗೆ ಮಾತ್ರ ಈ ಶಿಷ್ಯವೇತನ ನೀಡಲಾಗುವುದು ಎಂದು ತಿಳಿಸಿದರು.
ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳ ತಂದೆ- ತಾಯಿ ಹೆಸರಿನಲ್ಲಿ ಜಮೀನು ನೊಂದಣಿಯಾಗಿರಬೇಕು. ಯಾವುದೇ ಆದಾಯ ಮಿತಿ ಅನ್ವಯಿಸುವುದಿಲ್ಲ. ಎಲ್ಲಾ ವರ್ಗದ ರೈತರ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದ್ದು, ಎಸ್.ಎಸ್.ಪಿ. ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಸ್ವಾಮಿ, ಉಪ ನಿರ್ದೇಶಕಿ ವಿನುತಾ, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ಕೃಷ್ಣಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಭವ್ಯಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……